(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.15. ಈ ಬಾರಿ ಉತ್ತಮ ಮಳೆಯ ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ಮಳೆಯು ಮೊದಲ ತಿಂಗಳು ಕೊಂಚ ನಿರಾಸೆ ಉಂಟು ಮಾಡಿತ್ತಾದರೂ ಜುಲೈ 17 ರ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಒಡಿಸ್ಸಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿರುವುದರಿಂದ ಉತ್ತಮ ಮಳೆಯನ್ನು ನಿರೀಕ್ಷಿಸಲಾಗಿದ್ದು, ಜುಲೈ 17 ರಿಂದ ನಾಲ್ಕು ದಿನಗಳ ಕಾಲ ಉತ್ತಮ ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಮಳೆ ಬೀಳಲಿದೆ. ಜುಲೈ ತಿಂಗಳಲ್ಲಿ ಮಳೆ ಕೊರತೆ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಜುಲೈ ತಿಂಗಳಲ್ಲಿ ಮಲೆನಾಡು ಭಾಗದಲ್ಲಿ ಮಳೆ ಕೊರತೆಯಾಗಿತ್ತು. ಜುಲೈ 13 ರ ವರೆಗೆ ರಾಜ್ಯದಲ್ಲಿ ಶೇ. 52 ರಷ್ಟು ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.