(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.15. ಪ್ರವಾಸೋದ್ಯಮ ಇಲಾಖೆಯಿಂದ 2018-19ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಯೋಜನೆಯಡಿಯಲ್ಲಿ ಲಘುವಾಹನ ಚಾಲನಾ ಪರವಾನಗಿ ಹಾಗೂ ಚಾಲಕರ ಬ್ಯಾಡ್ಜ್ ಹೊಂದಿರುವ 20 ರಿಂದ 40 ವರ್ಷ ವಯೋಮಿತಿಯೊಳಗಿನ ನಿರುದ್ಯೋಗಿ ವಿದ್ಯಾವಂತ ಯುವಕ/ಯುವತಿಯರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಪ್ರವಾಸಿ ವಾಹನಗಳನ್ನು ಖರೀದಿಸಿ ವಿತರಿಸುವ ಸಲುವಾಗಿ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರವಾಸಿ ಟ್ಯಾಕ್ಸಿಗಳಿಗೆ ತಗಲುವ ಒಟ್ಟು ವೆಚ್ಚಕ್ಕೆ ಗರಿಷ್ಠ ರೂ. 3 ಲಕ್ಷಗಳನ್ನು ಇಲಾಖೆಯಿಂದ ಸಹಾಯ ಧನ ರೂಪದಲ್ಲಿ ನೀಡಲಾಗುವುದು. ಟ್ಯಾಕ್ಸಿ ಮೊತ್ತದ ಶೇ.5 ರಷ್ಟು ಅಥವಾ ಆಯ್ಕೆಯ ವಾಹನಕ್ಕೆ ಹೆಚ್ಚುವರಿ ಡೌನ್ ಪೇಮೆಂಟ್ ಹಣವನ್ನು ಫಲಾನುಭವಿಯಿಂದ ಭರಿಸಿಕೊಂಡು ಉಳಿದ ಮೊತ್ತವನ್ನು ರಾಷ್ಟ್ರೀಕೃತ/ವಾಣಿಜ್ಯ ಬ್ಯಾಂಕ್, ಸಹಕಾರಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಿ ಖರೀದಿಸಿ ವಿತರಿಸಲಾಗುವುದು. ಅರ್ಜಿಗಳನ್ನು ಜೂನ್ 12 ರಿಂದ ಜುಲೈ 11 ರೊಳಗಾಗಿ ಖುದ್ದಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ, ಲಾಲ್‍ಬಾಗ್, ಮಂಗಳೂರು ಇವರಿಂದ ಪಡೆದು, ದ್ವಿ-ಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸೀಲು ಮಾಡಿದ ಲಕೋಟೆಯೊಂದಿಗೆ ಜುಲೈ 11 ರೊಳಗಾಗಿ ನೊಂದಾಯಿತ ಅಂಚೆ ಮೂಲಕ ತಲುಪುವಂತೆ ಅಥವಾ ಖುದ್ದಾಗಿ ಲಕೋಟೆಯನ್ನು ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ:0824-2453926 ಅನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಕಟಣೆ ತಿಳಿಸಿದೆ.