(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.14. ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕರಾವಳಿಯು ಮತ್ತೊಮ್ಮೆ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಕರಾವಳಿಯ ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಪದೇ ಪದೇ ಭೂಕುಸಿತ ಉಂಟಾಗುತ್ತಿರುವುದರಿಂದ ಚಿಕ್ಕಮಗಳೂರು ಮಂಗಳೂರು ರಸ್ತೆಯ ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧಿಸಲಾದ ನಂತರ ಬದಲಿ ಮಾರ್ಗವಾಗಿದ್ದ ಕುದುರೆಮುಖದಲ್ಲೂ ಸೇತುವೆಯೊಂದು ಮುಳುಗಿದ್ದು, ರಸ್ತೆ ತಡೆ ಉಂಟಾಗಿದೆ.
ಕಳಸ ಸಮೀಪದ ನಲ್ಲಿಬೀಡು ಎಂಬಲ್ಲಿರುವ ಸೇತುವೆ ಮುಳುಗಡೆಯಾಗಿರುವುದರಿಂದ ಕುದುರೆಮುಖ ಮಂಗಳೂರು ಮಾರ್ಗವು ಜಲಾವೃತ ಆಗಿದೆ. ಈ ಸೇತುವೆಯು ಇತಿಹಾಸದಲ್ಲಿ ಮೊದಲ ಬಾರಿಗೆ ಮುಳುಗಡೆಯಾಗಿದೆ ಎನ್ನಲಾಗಿದ್ದು, ಸೇತುವೆಯು ಎಲ್ಲೆಡೆಗಳಲ್ಲೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ.