(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.06. ಈ ಹಿಂದಿನ ಸರಕಾರವು ಘೋಷಿಸಿದ್ದ ಮಹತ್ವಾಕಾಂಕ್ಷಿ ಯೋಜನೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಯೋಜನೆಗೆ ನೂತನ ಸಮ್ಮಿಶ್ರ ಸರಕಾರ ಕತ್ತರಿ ಹಾಕಿದ್ದು, ಕಾಸು ಕೊಟ್ಟರೆ ಮಾತ್ರ ಪಾಸು ಎಂದ ನಿರ್ಧರಿಸಲಾಗಿದೆ.
ರಾಜ್ಯದ 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದರಿಂದ ಸುಮಾರು ಎರಡು ಸಾವಿರ ಕೋಟಿಗಳಷ್ಟು ಆರ್ಥಿಕ ಹೊರೆ ಬೀಳುತ್ತದೆ ಎಂಬ ಕಾರಣದಿಂದ ಸಾರಿಗೆ ಇಲಾಖೆಯ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಯು ತಾತ್ಕಾಲಿಕವಾಗಿ ತಡೆ ಹಿಡಿದಿದೆ ಎನ್ನಲಾಗಿದೆ. ಈಗಾಗಲೇ 1 ರಿಂದ 7 ನೇ ತರಗತಿಯವರೆಗೆ ಉಚಿತ ಪಾಸ್ ಸೌಲಭ್ಯವನ್ನು ನೀಡಲಾಗುತ್ತಿದ್ದು, ಉಳಿದ ವಿದ್ಯಾರ್ಥಿಗಳ ಒಟ್ಟು ಪಾಸ್ ವೆಚ್ಚದ ಅರ್ಧದಷ್ಟು ಮೊತ್ತವನ್ನು ಸರ್ಕಾರ, ಶೇ.25 ಮೊತ್ತವನ್ನು ವಿದ್ಯಾರ್ಥಿಗಳು ಹಾಗೂ ಉಳಿದ ಶೇ.25 ಮೊತ್ತವನ್ನು ನಿಗಮ ಭರಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತಿದ್ದು, ಉಳಿದ ಎಲ್ಲ ವರ್ಗದ ವಿದ್ಯಾರ್ಥಿಗಳು ಹಣ ನೀಡಿಯೇ ಪಾಸ್ ಪಡೆದುಕೊಳ್ಳಬೇಕಿದೆ.