(ನ್ಯೂಸ್ ಕಡಬ) newskadaba.com ಕಡಬ, ಜು.14. ಪುತ್ತೂರು ತಾಲೂಕಿನ ಶಾಂತಿಮೊಗೇರು ಎಂಬಲ್ಲಿ ಕುಮಾಧಾರ ನದಿಗೆ ನಿರ್ಮಾಣವಾದ ಸೇತುವೆಯಲ್ಲಿ ಬುಧವಾರ ರಾತ್ರಿಯಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸೇತುವೆ ಉದ್ಘಾಟನೆಗೂ ಮುನ್ನ ಸಂಚಾರ ಆರಂಭವಾಗಿದ್ದು ಜನ ಸಂತಸ ಪಟ್ಟಿದ್ದಾರೆ.
ಸುಮಾರು 14 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಕಾಮಗಾರಿ ಮುಗಿದು ಎರಡು ತಿಂಗಳುಗಳೇ ಕಳೆದಿದ್ದರೂ ಉದ್ಘಾಟನೆಗಾಗಿ ಸಂಚಾರವನ್ನು ತಡೆಹಿಡಿಯಲಾಗಿತ್ತು. ಹಲವು ಸಲ ಉದ್ಘಾಟನೆ ದಿನಾಂಕ ನಿಗದಿಯಾಗಿ ಮುಂದೂಡಿಕೆಯಾಗಿತ್ತು. ಇತ್ತ ಜನತೆ ಸೇತುವೆ ಕಾಮಗಾರಿ ಮುಗಿದರೂ ಸಂಚಾರ ಮುಕ್ತಗೊಳಿಸಲು ಒತ್ತಾಯಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಸೇತುವೆಯನ್ನು ಪರಿಶೀಲಿಸಿದ ಬಳಿಕ ರಾತ್ರಿಯಿಂದ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಎರಡು ದಶಕಗಳ ಸೇತುವೆಯ ಬೇಡಿಕೆ: ನದಿ ದಾಟುವವರು ನಾಡ ದೋಣಿಯನ್ನು ಬಳಸುತ್ತಿದ್ದರು. ಆಲಂಕಾರು, ಕೊೖಲ, ರಾಮಕುಂಜ, ಪೆರಾಬೆ ನೆಲ್ಯಾಡಿ ಮುಂತಾದೆಡೆ ಸಭೆ ಸಮಾರಂಭಗಳಿದ್ದರೆ ಅಥವಾ ಕ್ಷೇತ್ರ ದರ್ಶನ ಮಾಡುವುದಿದ್ದರೆ ಶಾಸಕ ಅಂಗಾರ ಶಾಂತಿಮೊಗೇರು ಮುಖಾಂತರ ಬರುತ್ತಿದ್ದರು. ಮಳೆಗಾಲದಲ್ಲಿ ಸ್ವತ: ದೋಣಿ ದಾಟಿ ಬರುತ್ತಾರೆ. ಬಾಲಸುಬ್ರಹ್ಮಣ್ಯ ದೇವಸ್ಥಾನ ತನಕ ತನ್ನ ವಾಹನದಲ್ಲಿ ಬಂದು ಬಳಿಕ ದೋಣಿಯಲ್ಲಿ ನದಿ ದಾಟುತ್ತಾರೆ. ಇಲ್ಲಿ ಎರಡು ದಶಕಗಳಿಂದ ಸೇತುವೆಗಾಗಿ ಈ ಭಾಗದ ಜನರು, ಜನಪ್ರತಿನಿಧಿಗಳು ಹಲವು ಮನವಿ ಪ್ರಸ್ತಾವಣೆಗಳನ್ನು ಸಲ್ಲಿಸುತ್ತಲೇ ಬಂದಿದ್ದರು. ಕೊನೆಗೂ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಸುಳ್ಯ ಶಾಸಕ ಅಂಗಾರ ಸರಕಾರದ ಮುಂದೆ ಪ್ರಸ್ತಾಪವನ್ನಿಟ್ಟು ಸೇತುವೆ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾದರು.
ಮೈಸೂರು-ಮಡಿಕೇರಿ-ಧಮಸ್ಥಳ ರಾಜ್ಯ ಹೆದ್ದಾರಿಯ ಸಂಪರ್ಕ ಕೊಂಡಿಯಾಗಿ ಈ ಸೇತುವೆ ನಿರ್ಮಾಣವಾಗಿದ್ದರಿಂದ ಮೈಸೂರಿನಿಂದ ಸುಳ್ಯ-ಬೆಳ್ಳಾರೆ-ಸವಣೂರು-ಶಾಂತಿಮೊಗೇರು-ಆಲಂಕಾರು-ನೆಲ್ಯಾಡಿ-ಧರ್ಮಸ್ಥಳಕ್ಕೆ ಸುಲಭ ಸಂಪರ್ಕವಾಗಲಿದೆ. ಇದು ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಯಾಗಿದ್ದು ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ಸುತ್ತಿಬಳಸಿ ಹೋಗುವುದು ತಪ್ಪಿ ಸುಮಾರು 30 ಕಿಲೋ ಮೀಟರ್ ಕಡಿಮೆಯಾಗಲಿದೆ. ಮಾತ್ರವಲ್ಲದೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮಡಿಕೇರಿ-ಸಂಪಾಜೆ- ಮೈಸೂರು ರಾಜ್ಯ ಹೆದ್ದಾರಿಗೆ, ಜಾಲ್ಸೂರು-ಸುಬ್ರಹ್ಮಣ್ಯ-ಬೆಂಗಳೂರು ಹೆದ್ದಾರಿಗೆ, ಸುಬ್ರಹ್ಮಣ್ಯ-ಮಂಜೇಶ್ವರ-ಕಾಸರಗೋಡು ಹೆದ್ದಾರಿಗಳಿಗೆ ಸಂಪರ್ಕ ಕೊಂಡಿಯಾಗಿದೆ. ಧರ್ಮಸ್ಥಳ ಯಾತ್ರಿಕರಿಗೆ ತುಂಬಾ ಅನುಕೂಲವಾಗಿದೆ. ಹಣ, ಸಮಯ ಎರಡೂ ಉಳಿತಾಯವಾಗಲಿದೆ. ನದಿ ತಟದಲ್ಲಿರುವ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನ, ಕೂರ ಮಸೀದಿಗಳು ಇನ್ನಷ್ಟು ಪ್ರಸಿದ್ಧಿಗೆ ಬರಲಿದೆ.
ಅವಧಿಗೂ ಮುನ್ನ ಸೇತುವೆ ನಿರ್ಮಾಣ
ಕಾಮಗಾರಿ ಕೈಗೆತ್ತಿಕೊಂಡ ಐಶ್ಚರ್ಯ ಕನ್ಸ್ಟ್ರಕ್ಷನ್ ಎರಡು ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭಿಸಿತ್ತು. ಮೂರು ವರ್ಷದ ಅವಧಿ ಇದ್ದರೂ ಹಲವಾರು ಸಮಸ್ಯೆಗಳನ್ನು ಎದುರಿಸಿ ಹಗಲಿರುಳು ಕಾಮಗಾರಿ ನಡೆಸಿ ಸುಂದರ ಸೇತುವೆ ನಿರ್ಮಾಣ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಸೇತುವೆ ಕಾಮಗಾರಿ ಈಗಾಗಲೇ ಸಂಪುರ್ಣವಾಗಿ ಮುಗಿದಿದ್ದು ಗುತ್ತಿಗೆದಾರರರಿಂದ ಸೇತುವೆಯನ್ನು ಅಧಿಕೃತವಾಗಿ ಲೋಕೋಪಯೋಗಿ ಇಲಾಖೆ ಪಡೆದುಕೊಂಡಿದೆ. ಇದರಿಂದಾಗಿ ಈ ಬಾಗದಲ್ಲಿ ಅಡ್ಡವಾಗಿ ಕಟ್ಟಲಾಗಿದ್ದ ಬೇಲಿಯನ್ನು ಗುತ್ತಿಗೆದಾರರು ತೆರವು ಮಾಡಿರುವುದರಿಂದ ವಾಹನ ಸಂಚಾರ ಮುಕ್ತವಾಗಿದೆ. ಜು.22 ಉದ್ಟಾಟನಾ ದಿನಾಂಕ ಮುಂದೂಡಿದ ಬಳಿಕ ಜು.28 ಉದ್ಟಾಟನೆಯಾಗಲಿದೆ ಎಂಬ ಮಾತು ಈಗಾಗಲೇ ಕೇಳಿ ಬರುತ್ತಿದೆ. ಸೇತುವೆಯಿಂದಾಗಿ ಭೂಮಿ ಕಳೆದುಕೊಂಡು ಸಂತ್ರಸ್ಥರಾದವರಿಗೆ ಪರಿಹಾರ ಕೊಡುಸುವಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಪರಿಹಾರದ ಅಂದಾಜು ಮೊತ್ತವನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂತ್ರಸ್ಥರೊಂದಿಗೆ ಮಾತುಕತೆ ನಡೆಸಿ ಸರಕಾರದಿಂದ ಪೂರ್ಣ ಪ್ರಮಾಣದ ಪರಿಹಾರವನ್ನು ತೆಗೆಸಿಕೊಡುವುದಾಗಿ ಲಿಖಿತ ಹೇಳಿಕೆಯ ಮೂಲಕ ಭರವಸೆ ನೀಡಿದ್ದೇವೆ. ಈಗಾಗಲೇ ಬಾಕಿಯಿರುವ ಡಾಮರೀಕರಣಕ್ಕೆ 50ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 500ಮೀಟರ್ ರಸ್ತೆಯನ್ನು ಡಾಮರೀಕರಣ ಮಾಡಬಹುದಾಗಿದೆ. ಆರಂಭದಲ್ಲಿ ಆಲಂಕಾರು ಕಡೆಯಿಂದ ಸೇತುವೆಯವರೆಗೆ ಬಾಕಿಯಿರುವ 350 ಮೀಟರ್ ರಸ್ತೆಗೆ ಡಾಮರೀಕರಣ ಮಾಡಲಾಗುವುದು. ಬಳಿಕ 150 ಮೀಟರ್ ಸೇತುವೆ ಇನ್ನೊಂದು ಭಾಗದ ರಸ್ತೆಯನ್ನು ಡಾಮರೀಕರಣ ಮಾಡಲಾಗುವುದು. ಉಳಿದ 850 ಮೀಟರ್ ರಸ್ತೆಯ ಡಾಮರೀಕರಣಕ್ಕೆ 1 ಕೋಟಿ ಅನುದಾನ ಅಗತ್ಯವಿದ್ದು ಬೇಡಿಕೆ ಸಲ್ಲಿಸಲಾಗಿದೆ. ಮತ್ತು ಅನುದಾನ ಬಿಡುಗಡೆ ಮಾಡುವ ಬಗ್ಗೆ ಶಾಸಕ ಎಸ್. ಅಂಗಾರ ಪ್ರಯತ್ನದಲ್ಲಿದ್ದಾರೆ.
ನಾಗರಾಜ್, ಪುತ್ತೂರು ಲೋಕೋಪಯೋಗಿ ಇಲಾಖೆ ಇಂಜಿನಿಯರ್