ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ಹಿನ್ನೆಲೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರನ್ನು ತಕ್ಷಣವೇ ಬಂಧಿಸಿ: ಬಿಳಿನೆಲೆ ಬಿಜೆಪಿ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಸ್ವಚ್ಚತಾ ಆಂದೋಲನದ ಕಾಂಪೋಸ್ಟ್ ಪೈಪು ಖರೀದಿಯಲ್ಲಿ ಅವ್ಯವಹಾರದ ಆರೋಪದಲ್ಲಿ ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣ ದಾಖಲಾಗಿದ್ದು, ಅಧ್ಯಕ್ಷರನ್ನು ತಕ್ಷಣವೇ ಬಂಧಿಸಬೇಕು ಎಂದು ಬಿಳಿನೆಲೆ ಬಿಜೆಪಿ ಸಮಿತಿ ಅಗ್ರಹಿಸಿದೆ.

ಬಿಳಿನೆಲೆ ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಎರ್ಕ ಶನಿವಾರ ಕಡಬ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವ್ಯವಹಾರ ಆರೋಪದಲ್ಲಿ ಸಿಲುಕಿರುವ ಅಧ್ಯಕ್ಷರು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಇನ್ನೂ ಜಾಮೀನು ದೊರೆತಿಲ್ಲ, ಆದರೂ ಪಂಚಾಯಿತಿಗೆ ಬಂದು ತಮ್ಮ ಅಧಿಕಾರವನ್ನು ಚಲಾಯಿಸುತ್ತಾ ಸಾಕ್ಷ್ಯ ನಾಶಪಡಿಸಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು. ಕಾಂಪೋಸ್ಟ್ ಪೈಪ್ ಖರೀದಿ ಅವ್ಯವಹಾರದ ಪ್ರಮುಖ ಆರೋಪಿಯನ್ನು ಬಂಧಿಸಿರುವ ಎಸಿಬಿ ಅಧಿಕಾರಿಗಳು ಅವ್ಯವಹಾರದಲ್ಲಿ ಪಾಲು ಪಡೆದಿರುವ ಹಿನ್ನೆಲೆಯಲ್ಲಿ ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಎಫ್‍ಐಆರ್ ದಾಖಲಾದರೂ ಅವರನ್ನು ಬಂಧಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿದೆ. ನಾವು ಮಾಹಿತಿ ಹಕ್ಕಿನಲ್ಲಿ ಪಡೆದ ಮಾಹಿತಿಯ ಪ್ರಕಾರ ಇಲ್ಲಿ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ.

Also Read  ಮಂಗಳೂರು: 'ತುಡರ್' ತುಳು ಸಿನಿಮಾದ ಪೋಸ್ಟರ್ ಬಿಡುಗಡೆ

ಪಂಚಾಯಿತಿ ದಾಖಲೆಗಳ ಪ್ರಕಾರ ಹಲವರಿಗೆ ಪೈಪು ವಿತರಿಸಲಾಗಿದೆ. ಅಸಲಿಗೆ ಕೆಲವರ ಹೆಸರು ಮಾತ್ರ ನೋಂದಣಿಯಾಗಿದ್ದು ಅವರಿಗೆ ಪೈಪು ಸಿಗಲೇ ಇಲ್ಲ. ನೆಟ್ಟಣದ ಹೋಟೇಲ್‍ನ ಪ್ರಕಾಶ್, ನೆಟ್ಟಣ ಕಲಾ ಪ್ಲಾಸ್ಟಿಕ್‍ನ ತಿಮ್ಮಪ್ಪ ಗೌಡ, ಬಿಳೆನೆಲೆಯ ಸುಂದರ ಎಂಬವರಿಗೆ ದಾಖಲೆಗಳ ಪ್ರಕಾರ ಪೈಪು ವಿತರಿಸಲಾಗಿದೆ. ಆದರೆ ಅವರಿಗೆ ಈವರೆಗೆ ಪೈಪು ಸಿಕ್ಕಿಲ್ಲ, ಇಂತಹ ಅನೇಕ ಉದಾಹರಣೆಗಳಿವೆ. ನೂರು ಪೈಪುಗಳನ್ನು ಖರೀದಿಸಿ ಕೇವಲ 75 ಪೈಪುಗಳನ್ನು ವಿತರಿಸಲಾಗಿದೆ, ವಿಶೇಷವೆಂದರೆ ಈ ಯೋಜನೆ ಬರುವ ಮೊದಲೇ ಮೃತಪಟ್ಟಿರುವ ಕಿಟ್ಟ ಬಿನ್ ರಾಮ ವಾಲ್ತಾಜೆ ಎಂಬವರಿಗೆ ಪೈಪು ವಿತರಿಸಲಾಗಿದೆ ಎಂದು ದಾಖಲೆಯಲ್ಲಿದೆ. ಅವ್ಯವಹಾರ ನಡೆಸಿರುವ ಬಗ್ಗೆ ಪ್ರಕರಣ ದಾಖಲಾದ ಬಳಿಕ ಅಧ್ಯಕ್ಷರ ಮನೆಯಲ್ಲಿರಿಸಲಾಗಿದ್ದ ಪೈಪುಗಳನ್ನು ರಾತ್ರೋ ರಾತ್ರಿ ಪಂಚಾಯಿತಿ ಆವರಣಕ್ಕೆ ತಂದು ಹಾಕಲಾಗಿದೆ. ಇಂತಹ ಕೃತ್ಯಗಳನ್ನು ಮಾಡಿರುವ ಅಧ್ಯಕ್ಷರು ಪಂಚಾಯಿತಿಯಲ್ಲಿ ನಡೆಸಿರುವ ಅವ್ಯವಹಾರಗಳು ಒಂದೆರಡಲ್ಲ. ಅವರಿಗೆ ಇನ್ನೂ ಜಾಮೀನು ಮಂಜೂರಾಗಿಲ್ಲ. ಆದರೂ ಪಂಚಾಯಿತಿಯಲ್ಲಿ ತಮ್ಮ ಅಧಿಕಾರದ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇವರು ಅವ್ಯವಹಾರಕ್ಕೆ ಸಂಬಂಧಪಟ್ಟ ಕೆಲವು ಸಾಕ್ಷ್ಯ ನಾಶ ಮಾಡಲು ಹುನ್ನಾರ ನಡೆಸುತ್ತಿರುವುದರಿಂದ ತಕ್ಷಣ ಅವರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ವಿಜಯ ಕುಮಾರ್ ಅಗ್ರಹಿಸಿದರು.

Also Read  ಮಂಗಳೂರು: ಚುನಾವಣಾ ಗುರುತಿನ ಚೀಟಿಗೆ ಆಧಾರ್ ಜೋಡಿಸಲು ಜಿಲ್ಲಾಧಿಕಾರಿ ಸೂಚನೆ

ಬಿಳಿನೆಲೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ ಮಾತನಾಡಿ ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅವ್ಯಹಾರ ನಡೆಸಿರುವ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಅನೇಕ ದಾಖಲೆಗಳು ನಮ್ಮ ಕೈಯಲ್ಲಿವೆ, ನಾವು ಅದರ ಆಧಾರದಲ್ಲಿ ಎ.ಸಿಬಿಯಲ್ಲಿ ಪ್ರತ್ಯೇಕ ದೂರು ದಾಖಲಿಸುತ್ತೇವೆ ಎಂದರು. ತನಿಯ ಕೊರಗ ಮಾತನಾಡಿ ಅಧ್ಯಕ್ಷರು ನಮ್ಮ ಸಮುದಾಯಕ್ಕೆ ಸಿಗಬೇಕಾದ ಸವಲತ್ತುಗಳನ್ನು ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಸರೋಜಿನಿ ಜಯಪ್ರಕಾಶ್, ಕಡಬ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ್ ವಾಲ್ತಾಜೆ, ರವಿ ಪರವ ನೆಟ್ಟಣ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top