ಸಂಘಟನೆಯೇ ನನ್ನ ತಾಯಿ-ತಂದೆ: ಸುಳ್ಯ ಶಾಸಕ ಎಸ್.ಅಂಗಾರ ► ಆಲಂಕಾರು: ಬಿಜೆಪಿ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನಾ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ನನಗೆ ನನ್ನ ತಂದೆ ತಾಯಿ ವಿದ್ಯಾಭ್ಯಾಸ ನೀಡಿದರೆ, ಸಂಘಟನೆ ನನಗೆ ಸ್ಥಾನಮಾನವನ್ನು ಕಲ್ಪಿಸಿದೆ. ಆದ್ದರಿಂದ ನನಗೆ ಸಂಘ ಹಾಗೂ ಸಂಘಟನೆ ತಂದೆ ತಾಯಿಗೆ ಸಮಾನ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.

ಅವರು ಶುಕ್ರವಾರ ಆಲಂಕಾರು ರಾಣಿಮಹಲ್‍ನಲ್ಲಿ ನೆಲ್ಯಾಡಿ, ಬೆಳಂದೂರು ಹಾಗೂ ಕಡಬ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಿ ಮಾತನಾಡುತ್ತಿದ್ದರು. ನಾನು ಆರು ಬಾರಿ ಶಾಸಕನಾಗಿ ಆಯ್ಕೆ ಯಾಗಬೇಕಾದರೆ ನನ್ನ ಹಿಂದೆ ಸಂಘಟನೆಯ ಶಕ್ತಿ ಹಾಗೂ ಕಾರ್ಯಕರ್ತರ ಅಪಾರ ಶ್ರಮವಿದೆ. ಅವರನ್ನು ಬಿಟ್ಟು ಅಂಗಾರ ಏನೇನೂ ಅಲ್ಲ, ನಾನು ಈ ಸ್ಥಾನದಲ್ಲಿ ಇರಬೇಕಾದರೆ ಅದಕ್ಕೆ ಸಂಘವೇ ಪ್ರೇರಣೆಯಾಗಿದೆ. ಪಕ್ಷ ಹಾಗೂ ಸಂಘದ ಸಿದ್ದಾಂತದ ನನಗೆ ಸಂಸ್ಕಾರ ಕಲಿಸಿಕೊಟ್ಟಿದೆ. ನಾನು ಯಾವತ್ತೂ ಅಧಿಕಾರವನ್ನು ಬಯಸಿದವನಲ್ಲ, ಸಿಕ್ಕ ಅವಕಾಶವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎನ್ನುವ ತೃಪ್ತಿ ಇದೆ. ವಿಧಾನಸಭಾ ಕ್ಷೇತ್ರದ 76 ಗ್ರಾಮಗಳಲ್ಲಿ ಕೂಡಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಆದರೂ ವಿರೋಧ ಪಕ್ಷದವರು ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ. ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಪಕ್ಷಕ್ಕೆ ಹಾಗೂ ಕ್ಷೆತ್ರದ ಜನತೆ ಮುಜುಗರ ಆಗದ ರೀತಿಯಲ್ಲಿ ನನ್ನ ಕರ್ತವ್ಯ ಮಾಡುತ್ತೇನೆ ಎಂದು ಅಂಗಾರ ಹೇಳಿದರು.

ಸುಳ್ಯಮಂಡಲ ಬಿಜೆಪಿ ಅಧ್ಯಕ್ಷ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಮುಖಂಡ ಎ.ವಿ.ತೀರ್ಥರಾಮ, ನೆಲ್ಯಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಮಹಿಳಾ ಮೋರ್ಚಾದ ಮುಖಂಡೆ ಪುಲಸ್ತ್ಯಾ ರೈ ಅಭಿನಂದಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಆಶಾ ತಿಮ್ಮಪ್ಪ ಗೌಡ, ಪ್ರಮೀಳಾ ಜನಾರ್ಧನ ಆಚಾರ್ಯ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಸದಸ್ಯರಾದ ಜಯಂತಿ ಆರ್. ಗೌಡ, ಪಿ.ವೈ.ಕುಸುಮಾ, ತೇಜಶ್ವಿನಿ ಶೇಖರ್ ಕಟ್ಟಪುಣಿ, ತಾರಾ ತಿಮ್ಮಪ್ಪ ಪೂಜಾರಿ, ಬಿಜೆಪಿ ಮುಖಂಡರಾದ ಎ.ಬಿ.ಮನೋಹರ ರೈ, ಪಿ.ಜಿ.ಎಸ್.ಎನ್ ಪ್ರಸಾದ್, ಪುಷ್ಪಾವತಿ ಕಳುವಾಜೆ, ಧರ್ಮೆಂದ್ರ ಕಟ್ಟತ್ತಾರು, ವಾಡ್ಯಪ್ಪ ಗೌಡ ಎರ್ಮಾಯಿಲ್, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಬಾಳಪ್ಪ, ಶೀನಪ್ಪ, ಅಶ್ರಫ್ ಕಾಸಿಲೆ, ದಯಾನಂದ ಗೌಡ ಆಲಡ್ಕ, ಪ್ರಕಾಶ್ ಎನ್.ಕೆ, ಗಣೇಶ್ ಉದನಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಕುವೈಟ್ ನಲ್ಲಿ ಅಗ್ನಿ ಅವಘಡ ➤ ಕರಾವಳಿಯ ಯುವಕ ಮೃತ್ಯು

ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅತೀ ಹೆಚ್ಚು ಲೀಡ್ ಕೊಟ್ಟ ಬೂತ್‍ಗಳ ಬಿಜೆಪಿ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಹಿರಿಯ ಕಾರ್ಯಕರ್ತರಾದ ದೇವರಮಾರು ಬೆಳಿಯಪ್ಪ ಗೌಡ, ಮರವಂತಿಲ ನಾರಾಯಣ ರೈ, ಶೀನಪ್ಪ ಗೌಡ ವಳಕಡಮ ಹಾಗೂ ಧರ್ಮಪಾಲ ರಾವ್ ಕಜೆ ಶಾಸಕ ಅಂಗಾರ ಅವರನ್ನು ಕಾರ್ಯಕರ್ತರ ಪರವಾಗಿ ಸನ್ಮಾನಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಪ್ರಸ್ತಾವನೆಗೈದರು. ಆಶಾ ತಿಮ್ಮಪ್ಪ ವಂದೇ ಮಾತರಂ ಹಾಡಿದರು. ಸುಳ್ಯ ಮಂಡಲ ಬಿಜೆಪಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು. ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

Also Read  ಉಪ್ಪಿನಂಗಡಿ: ದಂಪತಿ ಆತ್ಮಹತ್ಯೆ

ಆರ್‍ಎಸ್‍ಎಸ್ ಗೆ ಪಾದಾರ್ಪನೆಯ ಬಡತನದ ದಿನಗಳನ್ನು ನೆನೆದ ಶಾಸಕರು:
ನಾನೊಬ್ಬ ಕೂಲಿ ಕಾರ್ಮಿಕನ ಮಗನಾಗಿ ಹೊಟ್ಟೆಗೆ ಹಿಟ್ಟಿಲ್ಲದೆ, ಉಡಲು ಬಟ್ಟೆ ಇಲ್ಲದೆ ಕಷ್ಟದ ದಿನಗಳಲ್ಲಿ ಬದುಕಿ ಬಂದವನು, ಅಂದಿನ ದಿನಗಳಲ್ಲಿ ಸಂಘದ ಹಿರಿಯರಾದ ತಲ್ಲೂರು ರಾಮಚಂದ್ರ ಅವರು ನನ್ನ ಮನೆಗೆ ಬಂದು ಸಂಘದ ಶಾಖೆಗೆ ಬರುವಂತೆ ಆಹ್ವಾನಿಸುತ್ತಿದ್ದರು. ನಾನು ಅದನ್ನು ತಿರಸ್ಕರಿಸುತ್ತಲೇ ಬರುತ್ತಿದೆ, ಕೊನೆಗೆ ತಂದೆಯವರ ಅನುಮತಿ ಪಡೆದು ಶಾಖೆಗೆ ಹೋದೆ, ಬಳಿಕ ಸಂಘದ ಶಿಕ್ಷಣ ಪಡೆಯುವಂತೆ ತಲ್ಲೂರು ಅವರು ಒತ್ತಾಯಿಸಿದಾಗ ನಾನಾ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೆ, ಆದರೂ ಅದರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸಂಘ ಶಿಕ್ಷಣ ಪಡೆದೆ. ಆಗ ನನಗೆ ನಾನು ಮಂದೆ ರಾಜಕೀಯಕ್ಕೆ ಬರುತ್ತೇನೆ ಎನ್ನುವ ಕಲ್ಪನೆ ಕೂಡಾ ಇರಲಿಲ್ಲ. ಎಲ್ಲವನ್ನು ಕಾಲವೇ ನಿರ್ಣಯ ಮಾಡುತ್ತದೆ. ನನಗೆ ಬದುಕು ಪಾಠ ಕಲಿಸಿದೆ, ಸಂಘ ಸಂಸ್ಕಾರ ನೀಡಿದೆ. ಅಂತಹ ಹಿರಿಯರನ್ನು ಹಾಗೂ ನಡೆದು ಬಂದ ದಾರಿಯನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅವರ ಆಶಯಕ್ಕೆ ಬದ್ದನಾಗಿ ಇನ್ನು ಮುಂದೆ ಕೂಡಾ ಕೆಲಸ ಮಾಡುವೆ ಎಂದು ಶಾಸಕರು ಭಾವುಕರಾಗಿ ನುಡಿದರು.

error: Content is protected !!
Scroll to Top