(ನ್ಯೂಸ್ ಕಡಬ) newskadaba.com ಉಡುಪಿ, ಜೂ.01. ‘ನಿಫಾ ವೈರಸ್ ಗೆ ಮೂಲ ಕಾರಣ ಫಾರಂ ಕೋಳಿಗಳು’ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದು, ಈ ಬಗ್ಗೆ ಮಣಿಪಾಲ ಕೇಂದ್ರದಲ್ಲಿ ಯಾವುದೇ ಕೋಳಿಗಳನ್ನು ಪರೀಕ್ಷೆಗೆ ಒಳಪಡಿಸಿಲ್ಲ ಮತ್ತು ದೃಢಪಡಿಸಿರುವುದಿಲ್ಲ ಎಂದು ಮಣಿಪಾಲ ಸೆಂಟರ್ ಫಾರ್ ವೈರಸ್ ರಿಸರ್ಚ್ ಮುಖ್ಯಸ್ಥ ಡಾ. ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಣಿಪಾಲ ಸೆಂಟರ್ ಫಾರ್ ವೈರಸ್ ರಿಸರ್ಚ್ ಕೇಂದ್ರವು ನಿಫಾ ವೈರಸ್ ಅನ್ನು ಗುರುತಿಸುವಲ್ಲಿ ಮತ್ತು ಅದರ ಹರಡುವಿಕೆಯ ಮೂಲವನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸುತ್ತಿದ್ದು, ಇದೀಗ ನಮ್ಮ ಕೇಂದ್ರದ ಹೆಸರನ್ನು ದುರುಪಯೋಗ ಪಡಿಸಿಕೊಂಡು ಕೆಲವರು ಈ ರೀತಿಯಾಗಿ ‘ನಿಫಾ ವೈರಸ್ ಮೂಲ ಫಾರಂ ಕೋಳಿಗಳು. ಇದನ್ನು ಮಣಿಪಾಲದ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಡಾಕ್ಟರ್ಸ್ ತಿಳಿಸಿದ್ದಾರೆ’ ಎಂಬ ಸುಳ್ಳು ಸುದ್ದಿಯು ವಾಟ್ಸ್ಆ್ಯಪ್ ಮೂಲಕ ಹರಿದಾಡುತ್ತಿದ್ದು, ಜನತೆಗೆ ತಪ್ಪು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ಸುಳ್ಳು ಮಾಹಿತಿಯನ್ನು ಸೃಷ್ಠಿಸಿ ಅದನ್ನು ಕಳುಹಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಈಗಾಗಲೇ ಉಡುಪಿ ಸೈಬರ್ ಕ್ರೈಂ ಬ್ರಾಂಚ್ ನಲ್ಲಿ ದೂರನ್ನು ನೀಡಲಾಗಿದ್ದು, ಈ ರೀತಿಯ ತಪ್ಪು ಸಂದೇಶ ರವಾನಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದಿದ್ದಾರೆ.