(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಮೇ.31. ವಿಶ್ವ ಆರೋಗ್ಯ ಸಂಸ್ಥೆ (WHO) ವಿಶ್ವದ ಮಾನವ ಸಂಪತ್ತಿನ ರಕ್ಷಣೆ ಮಾಡುವುದಕ್ಕಾಗಿಯೇ 1987 ನೇ ವರ್ಷದಿಂದ ಮೇ 31 ನ್ನು ವಿಶ್ವ ತಂಬಾಕು ರಹಿತ ದಿನ ಎಂದು ಆರ್ಥ ಗರ್ಭಿತವಾಗಿ ಆಚರಿಸುತ್ತಾ ಬಂದಿದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ರೋಗರುಜಿನ, ಸಾವು ನೋವು, ದುಗುಡ ದುಮ್ಮಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಜನರಲ್ಲಿ ಜಾಗೃತಿ ಮೂಡಿಸವ ಸದುದ್ದೇಶದಿಂದಲೇ ಈ ಆಚರಣೆಯನ್ನು ಜಾರಿಗೆ ತಂದಿದೆ.
ಇಂದಿನ ವ್ಯಾಪಾರಿ ಮನೋಭಾವದ ಮತ್ತು ಜಾಗತೀಕರಣಗೊಂಡ ಜಗತ್ತಿನಲ್ಲಿ ಸಿಗರೇಟು, ತಂಬಾಕು ಸೇವನೆ ಎಂಬುದು ಪ್ರತಿಷ್ಠೆ ಮತ್ತು ಫ್ಯಾಷನ್ ಆಗಿ ಬಿಟ್ಟಿದೆ. ದೃಶ್ಯಮಾಧ್ಯಮ, ಜಾಹಿರಾತು ಮತ್ತು ಜಾಗತೀಕರಣದ ವೈಭವೀಕರಣದಿಂದ ಇಂದಿನ ಯುವ ಜನತೆ ದಾರಿ ತಪ್ಪಿ ಧಮಪಾನದ ಮೋಜಿನ ಜೂಜಿಗೆ ಬಲಿಯಾಗಿ ಲಕ್ಷಾಂತರ ಜನರು “ಸಾವಿಗೆ” ಪ್ರತಿದಿನ ಅಹ್ವಾನ ನೀಡುತ್ತಿದ್ದಾರೆ. ದಾರಿ ತಪ್ಪುತ್ತಿರುವ ಯುವಜನತೆಗೆ ಜಾಗೃತಿ ಮೂಡಿಸಲು ಮತ್ತು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ‘ತಂಬಾಕು ರಹಿತ’ ಸಮಾಜ ನಿರ್ಮಾಣ ಮಾಡುವ ಸದುದ್ದೇಶದಿಂದಲೇ ವಿಶ್ವ ತಂಬಾಕು ರಹಿತದಿನ ಎಂದು ಅರ್ಥಪೂರ್ಣವಾಗಿ ಮೇ 31 ನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.
ಧೂಮಪಾನ – ವಿಷಪಾನ
ನಮ್ಮ ದೇಹದ ಅರ್ಬುದ ರೋಗಕ್ಕೆ ಅತಿ ಪ್ರಾಮುಖ್ಯವಾದ ಕಾರಣ ಎಂದರೆ ಧೂಮಪಾನ ಒಂದು ಸಿಗರೇಟಿನಲ್ಲಿ ಸರಿಸುಮಾರು 7 ರಿಂದ 8 ಮಿಲಿ ಗ್ರಾಂ ನಷ್ಟು ‘ಟಾರ್’ ನ ಪ್ರಮಾಣವನ್ನು ಕಂಡುಹಿಡಿಯಲಾಗಿದೆ. ಅರ್ಬುದ ರೋಗಕ್ಕೆ ರಹದಾರಿ ನೀಡುವ ‘ಎನ್-ನೈಟ್ರೋಸೋಮಿಕೋಟಿನ್’ ಎಂಬ ಬಹಳ ಅಪಾಯಕಾರಿ ವಸ್ತು ಸಿಗರೇಟಿನಲ್ಲಿದೆ. ಏನಿಲ್ಲವೆಂದರೂ ಸುಮಾರು 4500 ಅಪಾಯಕಾರಿ ರಾಸಾಯನಿಕ ವಸ್ತುಗಳು ಸಿಗರೇಟಿನಲ್ಲಿ ಕಂಡುಬರುತ್ತದೆ. ಸಿಗರೇಟಿನ ಟಾರಿನಲ್ಲಿ ಬೆಂಜೋಪೈರಿನ್, ಪಾರಿನ್ಯೂಕ್ಲಿಯರ್ ಆಸಿಡ್, ಆರೋಮಾಟಿಕ್ ಹೈಡ್ರೊಕಾರ್ಬನ್, ನೈಟ್ರೋಸೊಮಿನ್ ಇತ್ಯಾದಿ 200ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಚೋದನ ರಾಸಾಯನಿಕಗಳು ಇದೆ ಎಂದು ಸಂಶೋದನೆಗಳಿಂದ ಕಂಡುಹಿಡಿಯಲಾಗಿದೆ. ಸಿಗರೇಟಿನ ಹೊಗೆಯಲ್ಲಿರುವ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೋನೋಕ್ಸೈಡ್ ಮತ್ತು ಹೈಡ್ರೋಜನ್ ಅನಿಲಗಳು ದೇಹದ ಆಮ್ಲಜನಕದ ಪೂರೈಕೆಗೆ ಅಡ್ಡಿ ಉಂಟುಮಾಡುತ್ತದೆ. ಧೂಮಪಾನದ ಹೊಗೆಯಲ್ಲಿರುವ ಹೈಡ್ರೋಜನ್ ಸಯಸೈಡ್, ಅಮೋನಿಯ, ಅಸಿಟೋನ್, ಫಿûೀನಾಲ್, ಹೈಡ್ರಾಜನ್, ಕ್ರೆರಿಡಿನ್ ಮುಂತಾದ ಅಪಾಯಕಾರಿ ಅನಿಲಗಳು, ರಾಸಾಯನಿಕಗಳು ನಮ್ಮ ಶ್ವಾಸಕೋಶಕ್ಕೆ ಮಾರಕವಾದ ಪರಿಣಾಮ ಬೀರಿ ಶ್ವಾಸಕೋಶದ ಅರ್ಬುದರೋಗಕ್ಕೆ ನಾಂದಿ ಹಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದರ ಜೊತೆಗೆ ಪೆÇಲೋನಿಯಂ-210 ಎಂಬ ರೇಡಿಯೋ ಆಕ್ಟಿನ್ ವಿಕಿರಣ ವಸ್ತು ಕೂಡಾ ಸಿಗರೇಟಿನ ಹೊಗೆಯಲ್ಲಿದೆ ಎಂದು ಸಂಶೋಧನೆಗಳಿಂದ ಖಚಿತಪಟ್ಟಿದೆ. ಸರಿ ಸುಮಾರು 600 ರಿಂದ 700 ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಧಹಿಸುವ ಸಿಗರೇಟ್ ಒಳಗಿನ ತಂಬಾಕು ನೂರಾರು ರಾಸಾಯನಿಕ ವಿಷಾನಿಲಗಳನ್ನು ತಯಾರು ಮಾಡುವ ಕಾರ್ಖಾನೆ ಇದ್ದಂತೆ ಎನ್ನಬಹುದು. ಒಟ್ಟಿನಲ್ಲಿ ಸಿಗರೇಟು ಎಂಬುದು ಅಪಾಯಕಾರಿ ರಾಸಾಯನಿಕಗಳ ಅಗ್ನಿಜ್ವಾಲೆ ಎಂದರೂ ತಪ್ಪಲ್ಲ.
ಯಾಕೆ ಧೂಮಪಾನ ತ್ಯಜಿಸಬೇಕು ?
ನಮ್ಮ ದೇಹದೊಳಗಿನ ಎಲ್ಲಾ ವಿಷಕಾರಿ ಅನಿಲಗಳನ್ನು ದೇಹದಿಂದ ಹೊರಹಾಕುವ ಕಾರ್ಯ ನಿರ್ವಹಿಸುವ ಅಂಗ ಯಕೃತ್ತು. ಧೂಮಪಾನದ ಮೂಲಕ ನಮ್ಮ ಶರೀರ ಪ್ರವೇಶಿಸುವ ವಿಷಾನಿಲಗಳು ನಮ್ಮ ಶ್ವಾಸಕೋಶದ ಒಳಗೆ ಪ್ರವೇಶಿಸಿ ಬಳಿಕ ರಕ್ತದ ಮೂಲಕ ಯಕೃತ್ತನ್ನು ತಲುಪುತ್ತದೆ. ಕಾಲಕ್ರಮೇಣ ಧೂಮಪಾನದಿಂದ ಯಕೃತ್ತು ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಂಡು ನಿಷ್ಕ್ರಯಕೊಳ್ಳುತ್ತದೆ. ಹೀಗೆ ಧೂಮಪಾನ ಶರೀರದ ಎಲ್ಲಾ ಅಂಗಗಳಾದ ಶ್ವಾಸಕೋಶ, ಯಕೃತ್, ರಕ್ತನಾಳ, ಮೆದುಳು ಮುಂತಾದ ಅಂಗಗಳನ್ನು ಒಂದೊಂದಾಗಿ ಆಪೋಶನ ತೆಗೆದುಕೊಂಡು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಕುಂದಿಸಿ ಧೂಮಪಾನಿ ಶರೀರವನ್ನು ರೋಗಗಳ ಹಂದರವಾಗಿ ಮಾರ್ಪಾಡುಮಾಡುತ್ತದೆ.
ಧೂಮಪಾನ ತ್ಯಜಿಸಿದ ಬಳಿಕದ ಪರಿಣಾಮಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ :
(a) 24 ಗಂಟೆಗಳ ನಂತರ
• ರಕ್ತದ ಒತ್ತಡ ಸಹಜ ಸ್ಥಿತಿಗೆ ಬರುತ್ತದೆ.
• ನಾಡಿಮಿಡಿತ ಸಹಜ ಸ್ಥಿತಿಗೆ ಬರುತ್ತದೆ.
• ಕೈಕಾಲುಗಳ ತಾಪಮಾನ ಸಹಜ ಸ್ಥಿತಿಗೆ ತಲುಪುತ್ತದೆ.
• ಮನಸ್ಸು ಸಮಸ್ಥಿತಿಗೆ ಬರುತ್ತದೆ.
• ರಕ್ತದಲ್ಲಿ ಸೇರಿದ ಕಾರ್ಬನ್ ಮೋನೊಕ್ಸೈಡ್ (ಇಂಗಾಲ)ದ ಪ್ರಮಾಣ ಕಡಿಮೆಯಾಗಿ, ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ.
• ಹೃದಯ ಬಡಿತ ಸಹಜಸ್ಥಿತಿಗೆ ಬಂದು, ಹೃದಯ ಕ್ರಿಯಾಶೀಲಗೊಳ್ಳುತ್ತದೆ.
(b) ಒಂದು ವಾರದ ಬಳಿಕ
• ನಿಷ್ಕ್ರಿಯಗೊಂಡ ನರನಾಡಿಗಳು ಚೇತರಿಸಿಕೊಳ್ಳುತ್ತದೆ.
• ಜಡಗೊಂಡ ಪಂಚೇಂದ್ರಿಯಗಳು ಚುರುಕುಗೊಳ್ಳುತ್ತದೆ.
• ನಾಲಗೆಯಲ್ಲಿನ ರುಚಿ ಸಹಜ ಸ್ಥಿತಿಗೆ ಮರಳುತ್ತದೆ.
• ದೇಹದಲ್ಲಿ ಚೈತನ್ಯ ತುಂಬಿ, ಆಯಾಸ, ಉಬ್ಬಸ ಕಡಿಮೆಯಾಗುತ್ತದೆ.
• ದೇಹದ ರಕ್ತಸಂಚಾರ ಉತ್ತಮಗೊಳ್ಳುತ್ತದೆ.
• ದೇಹದ ಇತರ ಅಂಗಾಂಗಗಳ ಕ್ರಿಯಶೀಲತೆ ಉತ್ತಮಗೊಳ್ಳುತ್ತದೆ.
(c) 6 ತಿಂಗಳ ಬಳಿಕ
• ರಕ್ತದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ ಸಹಜ ರಕ್ತ ಸಂಚಾರಕ್ಕೆ ಅವಕಾಶ ನೀಡುತ್ತದೆ.
• ಶ್ವಾಸಕೋಶದ ಶಕ್ತಿ ಸಾಮರ್ಥ್ಯ ಶೇ 40ರಷ್ಟು ಹೆಚ್ಚುತ್ತದೆ.
• ದೇಹದ ರಕ್ತ ಸಂಚಲನೆ ಸರಿಯಾಗಿ ಹೊಸ ಉಲ್ಲಾಸ ಮಾಡುತ್ತದೆ.
• ದೇಹದ ಆರೋಗ್ಯ ಸುಧಾರಿಸಿ, ಧೂಮಪಾನದಿಂದ ಉಂಟಾಗುತ್ತಿದ್ದ ಕೆಮ್ಮು – ದಮ್ಮು ಇಲ್ಲದಂತಾಗಿ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
• ಆಯಾಸ ಮತ್ತು ಏದುಸಿರು ಸಮಸ್ಯೆ ಕ್ಷೀಣವಾಗುತ್ತದೆ ಮತ್ತು ಧೂಮಪಾನದಿಂದ ಘಾಸಿ ಗೊಂಡಿದ್ದ ಶ್ವಾಸಕೋಶ ಮತ್ತಿತರ ಅಂಗಾಂಗಗಳ ಜೀವಕೋಶಗಳು ಸಹಜ ಸ್ಥಿತಿಗೆ ಮರಳಿ, ಹೊಸ ಜೀವಕೋಶಗಳು ಹುಟ್ಟಿಕೊಳ್ಳುತ್ತದೆ.
• ಹೃದಯಾಘಾತ, ಕ್ಯಾನ್ಸರ್ ಮತ್ತು ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತಾ, ಆಲಸ್ಯ, ಆಯಾಸದಿಂದ ಮನಸ್ಸು ಮುಕ್ತಿಯಾಗಿ, ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಆರೋಗ್ಯ ಪೂರ್ಣವಾದ ಮಾನಸಿಕ ಚಿಂತನಾಶಕ್ತಿ ಮನಸ್ಸಿಗೆ ದೊರಕಿ, ದೈಹಿಕ ಸಾಮರ್ಥ್ಯವೂ ವೃದ್ಧಿಸುತ್ತದೆ.
ಎಲ್ಲಾ ಓಕೆ ತಂಬಾಕು ಯಾಕೆ?
ತಂಬಾಕು ಮತ್ತು ತಂಬಾಕಿನ ವಿವಿಧ ಉತ್ಪನ್ನಗಳಾದ ಬೀಡಿ, ಸಿಗರೇಟು, ಗುಟ್ಕಾ, ಪಾನ್‍ಪರಾಗ್, ಖೈನಿ, ಬೀಡ, ಜರ್ದಾ ಇವೆಲ್ಲವೂ ಮನುಕುಲದ ಬಹುದೊಡ್ಡ ವೈರಿ ಎಂದರೂ ತಪ್ಪಲ್ಲ. ಜಗತ್ತಿನಲ್ಲಿ ಹೃದಯದ ಖಾಯಿಲೆಯ ಬಳಿಕ ಮಾರಣಾಂತಿಕವಾದ ಎರಡನೇ ದೊಡ್ಡ ಖಾಯಿಲೆ ಎಂದರೆ ಕ್ಯಾನ್ಸರ್ (ಅರ್ಬುದ ರೋಗ) ವಿಪರ್ಯಾಸವೆಂದರೆ ತಡೆಯಬಹುದಾದ ಎಲ್ಲ ಕ್ಯಾನ್ಸರ್‍ಗಳಿಗೆ ಪ್ರಮುಖ ಕಾರಣ ತಂಬಾಕು ಮತ್ತು ಅದರ ಉತ್ಪನ್ನಗಳು, ಮನುಷ್ಯ ಜಾಗತಿಕವಾಗಿ ಬೆಳೆದಂತೆಲ್ಲಾ ಹೊಸಹೊಸ ಆವಿಷ್ಕಾರಗಳು ಹುಟ್ಟಿಕೊಂಡು, ತಂತ್ರಜ್ಞಾನದಲ್ಲಿ ಅದ್ಭುತ ಪ್ರಶಂಶೆ ಸಾಧಿಸಿದರೂ, ಧೂಮಪಾನ, ತಂಬಾಕು ಮುಂತಾದ ಆಧುನಿಕ ಜೀವನ ಶೈಲಿಯ ಸಂಗಾತಿಗಳು ಮನುಕುಲಕ್ಕೆ ಬಹುದೊಡ್ಡ ಕಂಟಕವಾಗಿ ಬೆಳೆದು ನಿಂತಿದೆ. ಆ ಕಾರಣಕ್ಕಾಗಿಯೇ ಹಿರಿಯರು ಮತ್ತು ತಿಳಿದವರು ಹೇಳುತ್ತಾರೆ. “ತಂಬಾಕು ತ್ಯಜಿಸಿ ಜೀವ ಉಳಿಸಿ” ಮತ್ತು “ಧೂಮಪಾನದ ನಗೆ, ಮನೆ ಮುಂದೆ ಹೊಗೆ” ತಂಬಾಕನ್ನು ಯಾವುದೇ ರೀತಿಯಲ್ಲಿ, ರೂಪದಲ್ಲಿ ಸೇವಿಸಿದಲ್ಲಿ ನಮ್ಮ ದೇಹದ ಯಾವುದೇ ಅಂಗದಲ್ಲಿ ಅರ್ಬುದ ರೋಗ ಉಂಟು ಮಾಡಬಲ್ಲದು. ಇವುಗಳಲ್ಲಿ ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಎದೆ ಗೂಡು /ಶ್ವಾಸಕೋಶ ಕ್ಯಾನ್ಸರ್ ಮುಂತಾದವು ಪ್ರಮುಖವಾಗಿ ಸೇರಿದೆ. ತಂಬಾಕು ಮತ್ತು ಧೂಮಪಾನ ಹಲವಾರು ಹೃದಯ, ಶ್ವಾಸಕೋಶ ಮತ್ತು ಮೆದುಳಿನ ರೋಗಗಳಿಗೆ ನಾಂದಿ ಹಾಡುತ್ತದೆ. ಒಂದು ಸಿಗರೇಟಿನಲ್ಲಿ ಮತ್ತು ತರುವ ನಿಕೋಟಿನ ಜೊತೆಗೆ ಸಾವಿರಾರು ರಾಸಾಯನಿಕಗಳು ಮತ್ತು ಕ್ಯಾನ್ಸರ್‍ಕಾರಕ ಅನಿಲಗಳು ಸೇರಿವೆ. ಅದಕ್ಕಾಗಿಯೇ ತಿಳಿದವರು ತಂಬಾಕಿನ ಮಜಾ-ಜೀವಕ್ಕೆ ಸಜಾ ಎಂದು ತೆಳು ಹಾಸ್ಯದಲ್ಲಿ ತಿಳಿ ಹೇಳುತ್ತಾರೆ. ನಿಕೋಟಿನ್ ಎಂಬ ವಸ್ತು ತಂಬಾಕನ್ನು ಅದು ಸ್ವತಃ ನಿಕೋಟಿನ್ ಕ್ಯಾನ್ಸರ್ ರೋಗವನ್ನು ಉಂಟು ಮಾಡುವುದಿಲ್ಲ. ಧೂಮಪಾನದ ಹೊಗೆಯನ್ನ ಸೇವಿಸುವ, ಧೂಮಪಾನ ಮಾಡದವರಿಗೂ ಕೂಡಾ ಹೃದಯದ ರಕ್ತನಾಳಗಳು ಪೆಡಸುಗೊಂಡು ಹೃದಯಾಘಾತವಾಗುವ ಸಂಭವವಿರುತ್ತದೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಕೂಡಾ ಬರುವ ಸಂಭವವಿರುತ್ತದೆ.
ನಮ್ಮ ಭಾರತ ದೇಶದಲ್ಲಿ ಸುಮಾರು 12 ರಿಂದ13 ಕೋಟಿ ತಂಬಾಕು ಬಳಕೆದಾರರು ಇದ್ದು, ಕ್ಯಾನ್ಸರ್ ಸೇರಿದಂತೆ, ತಂಬಾಕು ಸಂಬಂಧಿ ರೋಗಗಳಿಂದಾಗಿ ವರ್ಷಕ್ಕೆ ಒಂದು ಕೋಟಿ ಜನರು ಮೃತಪಡುತ್ತಾರೆ. ಆತಂಕಕಾರಿ ವಿಷಯವೆಂದರೆ ರೋಗಗಳು 30 ರಿಂದ 50 ವರ್ಷದವರಲ್ಲಿ ಕಂಡು ಬರುತ್ತದೆ. ಇವು ಜೀವನದ ಅತ್ಯಂತ ಉತ್ಪಾದಕಕರ ವರ್ಷಗಲಾಗಿದ್ದು ಇದರಿಂದಾಗಿ ಅಪಾರವಾದ ಸಾಮಾಜಿಕ ಮತ್ತು ಆರ್ಥಿಕ ನಷ್ಟ ಉಂಟಾಗುತ್ತದೆ. ತಂಬಾಕಿನ ಬಳಕೆ ಈಗ ಬದಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯ ಮಕ್ಕಳು ಯುವಕರು ಮತ್ತು ಮಹಿಳೆಯರು ಧೂಮಪಾನ ಮಾಡುತ್ತಿರುವುದು ಕ್ಯಾನ್ಸರ್ ಪ್ರಕರಣಗಳ ಬದಲಾವಣೆಯನ್ನು ನೋಡುದಾಗ ಕಂಡುಬರುತ್ತದೆ. ಹಿಂದೆಲ್ಲಾ ಕ್ಯಾನ್ಸರ್ ಹಿರಿಯ ನಾಗರೀಕರಿಗೆ (60 ವರ್ಷದ ನಂತರ) ಬರುತ್ತಿತ್ತು. ಆದರೆ ಈಗೀಗ 20-30ರ ಹರೆಯದ ಯುವಕರಲ್ಲೂ ಕ್ಯಾನ್ಸರ್ ಕಂಡು ಬರುವುದು ಬಹಳ ಆತಂಕಕಾರಿ ಬೆಳವಣಿಗೆ ಅದರಲ್ಲೂ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಗಂಟಲು ಕ್ಯಾನ್ಸರ್ ಯುವ ಜನತೆಯಲ್ಲಿ ಹೆಚ್ಚು ಹೆಚ್ಚಾಗಿ ಬರತೊಡಗಿದೆ.
ತಡೆಗಟ್ಟುವುದು ಹೇಗೆ?
1. ತಂಬಾಕು ಮತ್ತು ಅದರ ಉತ್ಪನ್ನಗಳ ಜಾಹಿರಾತುಗಳನ್ನು ನಿರ್ಬಂಧಿಸುವುದು.
2. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವುದು.
3. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವುದು.
4. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರ, ಬೀದಿನಾಟಕ ಮತ್ತು ತಂಬಾಕು ವರ್ಜನಾ ಶಿಬಿರಗಳನ್ನು ನಡೆಸುವುದು.
5. ದೃಶ್ಯ ಮಾಧ್ಯಮಗಳಲ್ಲಿ ಧೂಮಪಾನವನ್ನು ವೈಭವೀಕರಿಸುವ ದೃಶ್ಯಗಳಿಗೆ ಕತ್ತರಿ ಹಾಕುವುದು.
6. Cotpa (Control of Tobacco Products Act) ಕೊಟ್ಟಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು.
ಒಬ್ಬ ಸಾಮಾನ್ಯ ಧೂಮಪಾನಿ ಉಳಿದವರಿಗಿಂತ 8 ವರ್ಷಗಳ ಮನುಷ್ಯರಲ್ಲಿ ಮೊದಲು ಸಾಯುತ್ತಾನೆ. ತಂಬಾಕಿನ ಸೇವನೆಯಿಂದ ಈ ಕೆಳಗಿನ ಕಾಯಿಲೆಗಳಿಗೆ ತೀವ್ರತೆ ಉಂಟಾಗುತ್ತದೆ.
1. ಬಾಯಿ ಕ್ಯಾನ್ಸರ್
2. ಅಧಿಕ ರಕ್ತದ ಒತ್ತಡ
3. ರಕ್ತದಲ್ಲಿ ಹೆಬ್ಬಿನ ಕೊಬ್ಬಿನ (ಕೊಲೆಸ್ಟಾರಾಲ್) ಅಂಶ
4. ಎದೆಗೂಡಿನ ಕ್ಯಾನ್ಸರ್
5. ಗಂಟಲು ಮತ್ತು ಶಬ್ದ ಚೀಲದ ಕ್ಯಾನ್ಸರ್
6. ಶ್ವಾಸಕೋಶ ಸಂಬಂಧಿ ಕಾಯಿಲೆಗಳು
7. ಹೃದಯಾಘಾತ
8. ಅಂದತ್ವ ಮತ್ತು ದೃಷ್ಟಿಮಾಂದ್ಯತೆ
9. ಮೂಳೆಯ ಸಾಂದ್ರತೆ ಕಡಿಮೆಯಾಗಿ ಮೂಳೆಸವೆತ
ಹೆಂಗಸರಲ್ಲಿ ಮೇಲೆ ತಿಳಿಸದ ದುಷ್ಪರಿಣಾಮಗಳ ಜೊತೆಗೆ
1. ಮುಟ್ಟಿನ ತೊಂದರೆ
2. ಗರ್ಭಾಶಯದ ಕ್ಯಾನ್ಸರ್
3. ಲೈಂಗಿಕ ನಿರಾಸಕ್ತಿ ಮತ್ತು ಬಂಜೆತನ
4. ಎದೆಯ ಕ್ಯಾನ್ಸರ್ (Breast Cancer)
5. ಅಕಾಲಿಕ ಗರ್ಭಪಾತ
ಈ ಎಲ್ಲಾ ಕಾರಣಕ್ಕಾಗಿಯೇ ತಂಬಾಕು ಮತ್ತು ತಂಬಾಕಿನ ಎಲ್ಲಾ ಉತ್ಪನ್ನಗಳನ್ನು ನಾವೆಲ್ಲರೂ ಸೇರಿ ಬಹಿಷ್ಕರಿಸೋಣ. ತಂಬಾಕು ತ್ಯಜಿಸಿ “ಎಲ್ಲಾ ಓಕೆ, ತಂಬಾಕು ಯಾಕೆ” ಎಂಬ ಘೋಷವಾಕ್ಯದೊಂದಿಗೆ ಹೊಸ ಜೀವನ ಆರಂಭಿಸೋಣ, ಅದರಲ್ಲಿ ನಮ್ಮ ನಿಮ್ಮೆಲ್ಲರ ಹಿತ ಮತ್ತು ದೇಶದ ಹಿತ ಅಡಗಿದೆ.
ಡಾ.ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ