ಸಂಪಾಜೆ: ಕೃಷ್ಣ ಭಕ್ತಿಯ ಬಂಧ; ಅಮೆರಿಕನ್ ಯುವತಿ ಜೊತೆ ಸುಳ್ಯದ ಯುವಕನ ಸಾಂಪ್ರದಾಯಿಕ ವಿವಾಹ



(ನ್ಯೂಸ್‌ ಕಡಬ) newskadaba.com,  ಜು.18 ಸುಳ್ಯ: ಶ್ರೀಕೃಷ್ಣನ ಮೇಲಿನ ಭಕ್ತಿ ಹಾಗೂ ಭಾರತೀಯ ಸಂಸ್ಕೃತಿಯ ಮೇಲಿನ ಒಲವು ಅಮೆರಿಕದ ಯುವತಿ ಮತ್ತು ಸುಳ್ಯದ ಯುವಕನನ್ನು ವೈವಾಹಿಕ ಜೀವನಕ್ಕೆ ಒಪ್ತಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇವರ ಸಾಂಪ್ರದಾಯಿಕ ಹಿಂದೂ ವಿವಾಹ ಸಂಪನ್ನಗೊಂಡಿದೆ.







ಸುಳ್ಯ ತಾಲೂಕಿನ ಗೂನಡ್ಕ ಬೀಜದಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಮತ್ತು ಅಮೆರಿಕದ ಚಿಕಾಗೋ ನಗರದ ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋನ್ ಹಸೆಮಣೆ ಏರಿದ ದಂಪತಿ.ಚೆನ್ನೈ ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ಅಗರಬತ್ತಿ ಉದ್ಯಮ ನಡೆಸುತ್ತಿರುವ ಸಾಯಿ ಸಂಕೇತ್ ಹಾಗೂ ಭಾರತೀಯ ಆಧ್ಯಾತ್ಮಿಕತೆಗೆ ಆಕರ್ಷಿತರಾಗಿ ಭಾರತಕ್ಕೆ ಬಂದಿದ್ದ ಶಾನೋನ್ ಅವರ ನಡುವೆ ಮಾಯಾಪುರದಲ್ಲಿ ಪರಿಚಯವಾಗಿ, ಎರಡು ವರ್ಷಗಳ ಪ್ರೀತಿ ಇದೀಗ ಮದುವೆಯಾಗಿ ಬದಲಾಗಿದೆ.






ಸಾಂಪ್ರದಾಯಿಕ ಭಾರತೀಯ ವಧುವಿನ ಉಡುಗೆಯಲ್ಲಿ ಕಂಗೊಳಿಸಿದ ಶಾನೋನ್ ಅವರಿಗೆ ಅಲ್ಪಸ್ವಲ್ಪ ಕನ್ನಡವೂ ತಿಳಿದಿದ್ದು, ಕರ್ನಾಟಕದ ಆಹಾರ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ.ವಿಭಿನ್ನ ದೇಶ, ಭಾಷೆ ಮತ್ತು ಸಂಸ್ಕೃತಿ ಹೊಂದಿದ್ದರೂ ಕೃಷ್ಣ ಭಕ್ತಿ ಮತ್ತು ಜೀವನ ಮೌಲ್ಯಗಳ ಆಧಾರದ ಮೇಲೆ ಒಂದಾಗಿರುವ ಈ ಜೋಡಿಯ ವಿವಾಹಕ್ಕೆ ಎರಡೂ ಕುಟುಂಬಸ್ಥರು ಸಂಪೂರ್ಣ ಬೆಂಬಲ ನೀಡಿದ್ದು, ಈ ಅಪರೂಪದ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದೆ.

error: Content is protected !!
Scroll to Top