ಕೃತಕ ನೆರೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶ ಜಲಾವೃತ; ಲಕ್ಷಾಂತರ ರೂ. ನಷ್ಟ



(ನ್ಯೂಸ್ ಕಡಬ) newskadaba.com ಜು. 18. ಕರ್ನಾಟಕದ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿದ್ದು, ಹಲವು ಕೈಗಾರಿಕಾ ಘಟಕಗಳು ಜಲಾವೃತಗೊಂಡಿವೆ.







ಕೈಗಾರಿಕಾ ಘಟಕಗಳೊಳಗೆ ನೀರು ನುಗ್ಗಿದ ಪರಿಣಾಮ ಯಂತ್ರೋಪಕರಣಗಳು ಹಾಗೂ ಕಚ್ಚಾ ವಸ್ತುಗಳು ಹಾನಿಗೊಳಗಾಗಿದ್ದು, ಉದ್ಯಮಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.






ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿರುವ ಮಳೆನೀರು ಹರಿವಿನ ಚರಂಡಿಗಳ ಅವೈಜ್ಞಾನಿಕ ನಿರ್ಮಾಣ ಹಾಗೂ ಸಮರ್ಪಕ ನಿರ್ವಹಣೆಯ ಕೊರತೆಯೇ ಕೃತಕ ನೆರೆಗೆ ಮುಖ್ಯ ಕಾರಣವಾಗಿದೆ. ಬೈಕಂಪಾಡಿ ಎಪಿಎಂಸಿ ಮತ್ತು ಸುತ್ತಮುತ್ತಲಿನ ಚರಂಡಿಗಳು ಕಸದಿಂದ ಮುಚ್ಚಿಹೋಗಿದ್ದು, ಸಮುದ್ರಕ್ಕೆ ಸೇರುವ ಮುಖ್ಯ ಚರಂಡಿಯನ್ನೂ ಸ್ವಚ್ಛಗೊಳಿಸದ ಕಾರಣ ಮಳೆನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ.

ಪ್ರತಿ ಮಳೆಗಾಲದಲ್ಲೂ ಸಮಸ್ಯೆ ಮರುಕಳಿಸುತ್ತಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ಕೈಗೊಂಡಿಲ್ಲ ಎಂದು ಕೈಗಾರಿಕೋದ್ಯಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃತಕ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ತಕ್ಷಣವೇ ಉನ್ನತ ಮಟ್ಟದ ತಂಡವನ್ನು ರಚಿಸಿ ಸ್ಥಳ ಪರಿಶೀಲನೆ ನಡೆಸಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೈಗಾರಿಕೋದ್ಯಮಿಗಳು ಒತ್ತಾಯಿಸಿದ್ದಾರೆ.

error: Content is protected !!
Scroll to Top