ಪುತ್ತೂರು: ಶಾಲಾ ಮಕ್ಕಳ ಹಾಜರಾತಿಗಾಗಿ ಹಳೆ ವಿದ್ಯಾರ್ಥಿಯಿಂದ ಅತ್ಯಾಧುನಿಕ ‘ಸೂಪರ್ ಬಯೋಮೆಟ್ರಿಕ್’ ವ್ಯವಸ್ಥೆ ಅಭಿವೃದ್ಧಿ

(ನ್ಯೂಸ್‌ ಕಡಬ) newskadaba.com,  ಜು.18 ಪುತ್ತೂರು: ಶಾಲಾ ಮಕ್ಕಳ ಸುರಕ್ಷತೆಯನ್ನು ಬಲಪಡಿಸುವ ಮತ್ತು ವಿದ್ಯಾರ್ಥಿಗಳು ತರಗತಿ ತಪ್ಪಿಸುವುದನ್ನು ತಡೆಯುವ ಉದ್ದೇಶದಿಂದ, ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಅರುಣ್ ಕುಮಾರ್ ಅತ್ಯಾಧುನಿಕ ಸೂಪರ್ ಬಯೋಮೆಟ್ರಿಕ್’ ಹಾಜರಾತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ಆಗಮಿಸಿ, ಕ್ಯಾಮೆರಾ ಮತ್ತು ಬಯೋಮೆಟ್ರಿಕ್ ಮೂಲಕ ಹಾಜರಾತಿ ದಾಖಲಿಸುತ್ತಿದ್ದಂತೆಯೇ ಅವರ ಪೋಷಕರ ಮೊಬೈಲ್‌ಗೆ ಸ್ವಯಂಚಾಲಿತವಾಗಿ ಸಂದೇಶ (SMS) ರವಾನೆಯಾಗುತ್ತದೆ.

ಅಟಲ್ ಟಿಂಕರಿಂಗ್ ಲ್ಯಾಬ್ ನೆರವಿನೊಂದಿಗೆ, ರಾಸ್ಪ್‌ಬೆರಿ ಪೈ 5 ಪ್ರೊಸೆಸರ್ ಬಳಸಿ ಸುಮಾರು ₹15,000 ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಫೋಟೋ ಬಳಸಿ ವಂಚಿಸುವುದನ್ನು ತಡೆಯಲು ಇದರಲ್ಲಿ ರೆಟಿನಾ ಸ್ಕ್ಯಾನರ್ ಅಳವಡಿಸಲಾಗಿದೆ.

ಕೊಂಬೆಟ್ಟು ಪಿಯು ಕಾಲೇಜಿನ ಉಪಪ್ರಾಂಶುಪಾಲೆ ವಸಂತ ಮೂಲ್ಯ ಹಾಗೂ ಶಿಕ್ಷಕರಾದ ಆಶ್ಲೇಶ್ ಕುಮಾರ್ ಮತ್ತು ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ತಂತ್ರಜ್ಞಾನ ರೂಪುಗೊಂಡಿದೆ.ಕಳೆದ ಆರು ತಿಂಗಳಿಂದ ಕೊಂಬೆಟ್ಟು ಶಾಲೆಯಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ಪೂರ್ಣ ಪ್ರಮಾಣದ ಜಾರಿಗೆ ಸಿದ್ಧತೆ ನಡೆಯುತ್ತಿದೆ.

ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿರುವ ಈ ಯೋಜನೆಗೆ ರಾಜ್ಯ ಸರ್ಕಾರದಿಂದ ನಗದು ಬಹುಮಾನ ಹಾಗೂ ಶಿಕ್ಷಣ ಇಲಾಖೆಯಿಂದ ಪ್ರಶಂಸೆ ಲಭಿಸಿದೆ. ಪ್ರಸ್ತುತ ನಿಟ್ಟೆ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಅರುಣ್ ಕುಮಾರ್, ಬೊಳುವಾರಿನ ವಿನೋದ್ ಕುಮಾರ್ ಮತ್ತು ರಾಜೇಶ್ವರಿ ದಂಪತಿಯ ಪುತ್ರನಾಗಿದ್ದಾರೆ.

Scroll to Top