(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.26. ಮನೆಗೆ ನುಗ್ಗಿ ಮಹಿಳೆಯೋರ್ವರಿಗೆ ಚೂರಿಯಿಂದ ಇರಿದ ಪ್ರಕರಣವೊಂದು ಕುದ್ರೋಳಿಯಲ್ಲಿ ನಡೆದಿದ್ದು, ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡಿ ಸಮಾಜದಲ್ಲಿ ಕೋಮು ಪ್ರಚೋದನೆ ಉಂಟುಮಾಡಿದ ಘಟನೆ ಶುಕ್ರವಾರದಂದು ನಡೆದಿದೆ.
ಗುರುವಾರ ರಾತ್ರಿ ನಗರದ ಕುದ್ರೋಳಿಯಲ್ಲಿನ ಫ್ಲಾಟೊಂದರ ಒಳನುಗ್ಗಿದ ಯುವಕನೋರ್ವ ಮನೆಯಲ್ಲಿರುವ ಮಹಿಳೆಗೆ ಆಕೆಯ ಮಗನ ಎದುರೇ ಚಾಕುವಿನಿಂದ ಇರಿದು ಪರಾರಿಯಾಗುತ್ತಾನೆ. ಮಹಿಳೆಯ ಬೊಬ್ಬೆ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುತ್ತಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಘಟನೆಗೆ ಕಾರಣವೇನೆಂದು ಸೇರಿದ ಯಾರಿಗೂ ತಿಳಿಯುವುದಿಲ್ಲ.
ಆದರೆ ಶುಕ್ರವಾರದಂದು ವಾಸ್ತವಾಂಶ ತಿಳಿದುಬಂದಿದ್ದು, ಭಗ್ನ ಪ್ರೇಮಿಯ ದ್ವೇಷದಿಂದ ಈ ಕೃತ್ಯ ನಡೆದಿರುತ್ತದೆ. ಆ ಯುವಕ ಪರಿಚಯಸ್ಥನಾಗಿದ್ದರಿಂದ ಯಾವಾಗಲಾದರೊಮ್ಮೆ ಮನೆಗೆ ಬರುತ್ತಿದ್ದನೆನ್ನಲಾಗಿದ್ದು, ಕಳೆದ ಕೆಲವು ಸಮಯಗಳಿಂದ ಮಹಿಳೆಯನ್ನು ಪ್ರೀತಿಸುತ್ತೇನೆಂದು ಪೀಡಿಸುತ್ತಿದ್ದನೆನ್ನಲಾಗಿದೆ. ಗುರುವಾರ ರಾತ್ರಿ ಮನೆಗೆ ಬಂದು ಈ ವಿಚಾರ ಪ್ರಸ್ತಾಪಿಸಿದ ಯುವಕನಿಗೆ ಮಹಿಳೆ ಬುದ್ದಿವಾದ ಹೇಳಿರುವುದರಿಂದ ಕೆರಳಿದ ಯುವಕ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆದರೆ ವಾಸ್ತವಾಂಶ ತಿಳಿಯುವುದಕ್ಕೆ ಮೊದಲೇ ಕೆಲವು ನಾಮಾರ್ಧರು ವಾಟ್ಸ್ಅಪ್ ಮೂಲಕ ಅನ್ಯ ಸಮುದಾಯದವರಿಂದ ಮಹಿಳೆಗೆ ಚೂರಿ ಇರಿತ, ಮನೆಗೆ ಬಂದ ಭಿಕ್ಷುಕರಿಂದ ಮಹಿಳೆಗೆ ಚೂರಿ ಇರಿತ, ನೆರೆಹೊರೆಯವರಿಂದ ಮಹಿಳೆಗೆ ಚೂರಿ ಇರಿತ ಎಂಬಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸಿಯಾಗಿತ್ತು. ಇಂತಹ ಸುಳ್ಳು ಸುದ್ದಿಗಳು ಸಮಾಜದಲ್ಲೆಡೆ ಕೋಮು ಕೋಮುಗಳ ನಡುವೆ ಸಂಘರ್ಷಕ್ಕೆ ನಾಂದಿ ಹಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಯಾರೂ ಕೂಡಾ ಘಟನೆಯ ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಗೋಜಿಗೆ ತೆರಳದೆ ಸುಳ್ಳು ಸುದ್ದಿಗಳನ್ನು ಶೇರ್ ಮಾಡುತ್ತಿರುವುದು ವಿಪರ್ಯಾಸ.