ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಿತ್ರ ಇಂದು ತೆರೆಗೆ ► ಬಹು ನಿರೀಕ್ಷಿತ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ವಿಶೇಷತೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.25. ಕಲರ್ಸ್‌ ಆಫ್ ಆನೇಕಲ್‌ ಹೆಸರಿನಲ್ಲಿ ಸುದರ್ಶನ್‌, ರಾಮಮೂರ್ತಿ ಹಾಗೂ ದುಬೈಯ ಖ್ಯಾತ ಉದ್ಯಮಿ, ಹೆಸರಾಂತ ಗಾಯಕರು ಆಗಿರುವ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್  ಇಂಟರ್‌ನ್ಯಾಶನಲ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ ಖ್ಯಾತ ನಿರ್ದೇಶಕ ನರೇಂದ್ರಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷಿತ  ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಲನ ಚಿತ್ರ ಮೇ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್ ತಿಳಿಸಿದ್ದಾರೆ.

ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಹಿರಿಯ ನಟ ಅನಂತ್ ನಾಗ್ ಮತ್ತು ಯುವ ನಟಿ ರಾಧಿಕ ಚೇತನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಕಬ್ಬಡ್ಡಿ, ಸಂತೆಯಲ್ಲಿ ನಿಂತ ಕಬೀರ” ಸೇರಿದಂತೆ ಹೊಸಬಗೆಯ ಸಿನಿಮಾ ಮಾಡಿರುವ ನಿರ್ದೇಶಕ ನರೇಂದ್ರಬಾಬು, ಈ ಚಿತ್ರದ ಮೂಲಕ ಮತ್ತೊಂದು ಹೊಸ ಬಗೆಯ ಚಿತ್ರ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ವರೆಗೂ ಯಾರು ಮಾಡದಂಥ ವಿಭಿನ್ನ ಕಥಾ ಹಂದರವಾನ್ನಿ ಇಟ್ಟುಕೊಂಡು ನರೇಂದ್ರ ಬಾಬು ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ.  ಚಿತ್ರದ ಕತೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುವ ಸಿನಿಮಾ ಚಿತ್ರಕಥೆಯಲ್ಲಿ ಬಹಳ ರೋಚಕತೆಯಿಂದ ಮಾಡಿದೆ. ಈ ಸಿನಿಮಾ ಚಿತ್ರದ ಕಥೆ, ತಾರಾಬಳಗ ಹಾಗೂ ತಾಂತ್ರಿಕವರ್ಗದ ಕಾರಣದಿಂದಾಗಿ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದೆ. ಮಾತ್ರವಲ್ಲದೇ ಚಿತ್ರದ ಟ್ರೈಲರ್ ಕೂಡ ವಿಭಿನ್ನವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ ಎಂದರು.

ಸಿನೆಮಾದ ನಿರ್ದೇಶಕ ನರೇಂದ್ರಬಾಬು ಅವರ ಬಗ್ಗೆ ಹಿರಿಯ ನಟ ಅನಂತ್ ನಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಅವರ ಸಂಭಾಷಣೆ, ಬರಹ ನೋಡಿ ತುಂಬಾನೇ ಖುಷಿ ಅಗಿದೆ. ಅವರ ನಿರ್ದೇಶನ ಕೂಡ ನನಗೆ ಬಹಳಷ್ಟು ಇಷ್ಟ ಆಯಿತು. ಅವರು ಅಂದುಕೊಂಡಂತೆ ಸಿನೆಮಾ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿ ಸಂದರ್ಭ ನಿರ್ದೇಶಕ ನರೇಂದ್ರಬಾಬು ಅವರನ್ನು ಅನಂತ್ ನಾಗ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ಹರೀಶ್ ಶೇರಿಗಾರ್ ತಿಳಿಸಿದರು.

ನಿರ್ದೇಶಕ ನರೇಂದ್ರಬಾಬು ಅವರು ಮಾತನಾಡಿ, ಇದು ಎರಡು ಜನರೇಷನ್ ಕಥೆ ಹೊಂದಿದೆ. ಒಂದು ಅನಂತ್ ‌ನಾಗ್‌ ಅವರ ಕಥೆ ಸಾಗಿದರೆ, ಇನ್ನೊಂದು ರಾಧಿಕಾ ಚೇತನ್ ಜನರೇಷನ್ ಕಥೆ ತೆರೆದುಕೊಳ್ಳುತ್ತೆ. ಮುಖ್ಯವಾಗಿ ಲಿವಿಂಗ್‌ ರಿಲೇಷನ್ ‌ಶಿಪ್‌ ಕುರಿತಾದ ಹೂರಣವಿದೆ. ಈ ಎರಡೂ ಕಥೆಗಳಲ್ಲಿ ಸೂಕ್ಷ್ಮತೆಗಳಿವೆ. ಭದ್ರತೆ, ಅಭದ್ರತೆ ಕುರಿತಾದ ಅಂಶಗಳು ಚಿತ್ರದಲ್ಲಿವೆ ಎಂದು ಹೇಳಿದರು.

Also Read  ವಿಟ್ಲ: ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಚಿತ್ರ ತಂಡಕ್ಕೆ ಹಣಕಾಸಿನ ಸಮಸೈ ಎದುರಾದಾಗ ಹಿರಿಯ ನಟ ಅನಂತ್ ನಾಗ್ ಅವರು ಮಂಗಳೂರಿನವರೇ ಆದ ದುಬೈಯ ಖ್ಯಾತ ಉದ್ಯಮಿ, ಹೆಸರಾಂತ ಗಾಯಕ, ನಿರ್ಮಾಪಕ ಹರೀಶ್ ಶೇರಿಗಾರ್ ಅವರ ಸಹಾಯ ಪಡೆಯುವ ಬಗ್ಗೆ ಸಲಹೆ ನೀಡಿದರು. ಅವರಿಬ್ಬರ ಸ್ನೇಹ ದಿಂದಾಗಿ ಈಗಾಗಲೇ  ಮಾರ್ಚ್ 22 ಸಿನೆಮಾ ನಿರ್ಮಿಸಿ ಯಶಸ್ಸು ಕಂಡಿರುವ ಹರೀಶ್ ಶೇರಿಗಾರ್ ಅವರು ನಮ್ಮೊಂದಿಗೆ ಕೈಜೋಡಿಸಿದರು. ಮಾತ್ರವಲ್ಲದೇ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ದುಬೈ ಚಿತ್ರೀಕರಣದ ಎಲ್ಲ ಜವಾಬ್ದಾರಿ, ಹಣಕಾಸಿನ ವ್ಯವಸ್ಥೆಯನ್ನೆಲ್ಲ ಹರೀಶ್ ಶೇರಿಗಾರ್ ಅವರೇ ವಹಿಸಿದರು.

ಸಿನಿಮಾ ಚೆನ್ನಾಗಿ ಮೂಡಿ ಬಂದಿರುವುದರಿಂದ ಎಲ್ಲರಿಗೂ ತಲುಪಿಸುವ ಜವಾಬ್ದಾರಿಯನ್ನೂ ಅನಂತ್‌ ತಗೆದುಕೊಂಡಿದ್ದಾರೆ. ಸ್ವತಃ ಅವರೇ ವಿತರಕರಾದ ಜಯಣ್ಣ ಮತ್ತು ಭೋಗೇಂದ್ರ ಅವರಿಗೆ ಕರೆ ಮಾಡಿ, ಚಿತ್ರವನ್ನು ವಿತರಿಸುವಂತೆ ಹೇಳಿದ್ದಾರೆ. ಇದೇ ಮೇ 25ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕದ ಜತೆಗೆ ಏಕಕಾಲದಲ್ಲಿ ಪಕ್ಕದ ರಾಜ್ಯ ಹಾಗೂ ದೇಶದಲ್ಲೂ ತೆರೆಕಾಣಿಸುವ ಆಲೋಚನೆ ನಿರ್ಮಾಪಕರಾದ ಸುದರ್ಶನ್‌, ರಾಮಮೂರ್ತಿ ಹಾಗೂ ಹರೀಶ್‌ ಶೇರಿಗಾರ್‌ ಅವರದಾಗಿದೆ ಎಂದು ನಿರ್ದೇಶಕ ನರೇಂದ್ರಬಾಬು ವಿವರಿಸಿದರು.

ರಂಗಿತರಂಗ ಚಿತ್ರದ ಯಶಸ್ವಿ ನಾಯಕಿ ರಾಧೀಕ ಚೇತನ್ ಅವರು ಮಾತನಾಡಿ, ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಿರಿಯ ನಟ ಅನಂತ್ ನಾಗ್ ಅವರ ಜೊತೆ ಅಭಿನಯಿಸಲು ಅವಕಾಶ ಲಭಿಸಿರುವುದು ನನ್ನ ಭಾಗ್ಯ, ಅವರಿಂದ ಸಾಕಷ್ಟು ಕಲಿತೆ. ಮಾತ್ರವಲ್ಲದೇ ಚಿತ್ರ ತಂಡದ ಎಲ್ಲಾ ಸದಸ್ಯರು ಒಂದು ಕುಟುಂಬದಂತೆ ಕಾರ್ಯ ನಿರ್ವಾಹಿಸುತ್ತಿದ್ದರು. ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪರು ನಮಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದರು.

ಚಿತ್ರದ ಮತ್ತೊಂದು ವಿಶೇಷ ಎಂದರೆ ಈ ಚಿತ್ರಕ್ಕಾಗಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣ ಮಾಡಲಾಗಿರುವುದು.  ಈವರೆಗೂ ಕನ್ನಡದ ಯಾವುದೇ ಸಿನೆಮಾ ಇಲ್ಲಿ ಚಿತ್ರೀಕರಣವಾಗಿಲ್ಲ. ಹಾಗೆ ಚಿತ್ರೀಕರಣ ಮಾಡಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯನ್ನು “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಮುಡಿಗೇರಿಸಿಕೊಂಡಿದೆ..ಈ ಚಿತ್ರ ಅತ್ಯಂತ ಯಶಸ್ಸು ಕಾಣುವುದರಲ್ಲಿ ಯಾವೂದೇ ಸಂಶಯವಿಲ್ಲ. ಎಲ್ಲರೂ ಈ ಚಿತ್ರವನ್ನು ನೋಡಿ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ಹೇಳಿದರು.

Also Read  ಮೊಬೈಲ್ ಕಳ್ಳತನ ಮಾಡುತ್ತಿದ್ದ ಗುಂಪು ಪೊಲೀಸರ ವಶಕ್ಕೆ

ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಶೇರಿಗಾರ್ ಅವರ ಹಿರಿಯ ಸಹೋದರ ಪ್ರಕಾಶ್ ಶೇರಿಗಾರ್ ಉಪಸ್ಥಿತರಿದ್ದರು.

ನರೇಂದ್ರಬಾಬು ನಿರ್ದೇಶನದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾ ಟೈಟಲ್‌ ನೀಡಿದ್ದು ಅನಂತ್‌ನಾಗ್‌ ಎನ್ನುವುದು ವಿಶೇಷ. ಸಿನಿಮಾದ ಸ್ಕ್ರಿಪ್ಟ್‌ ಜತೆಗೆ ಹಲವು ಹಂತಗಳಲ್ಲಿ ಇವರು ಸಿನಿಮಾಗಾಗಿ ಮುತುವರ್ಜಿ ತಗೆದುಕೊಂಡಿದ್ದಾರೆ. ಅದಕ್ಕೆ ಕಾರಣ ಸಿನಿಮಾದ ಸ್ಟೋರಿ.

‘ಸ್ಕ್ರಿಪ್ಟ್‌ ಬರೆದ ನಂತರ ನಾನು ಅದನ್ನು ಓದಲು ಅನಂತ್‌ನಾಗ್‌ ಅವರ ಬಳಿಕೊಟ್ಟಿದ್ದೆ. ಅವರು ಸಾಕಷ್ಟು ಸಲಹೆಗಳನ್ನು ನೀಡಿದರು. ಅಲ್ಲದೇ, ಕಥೆಗೆ ಒಪ್ಪುವಂತಹ ಒಂದಷ್ಟು ಘಟನೆಗಳನ್ನೂ ವಿವರಿಸಿದರು. ಈ ಚಿತ್ರಕ್ಕೆ ಏನು ಶೀರ್ಷಿಕೆ ಇಡಬೇಕು ಎಂದು ತಲೆಕೆಡಿಸಿಕೊಂಡಾಗ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಂತ ಹೇಳಿದ್ದೇ ಅನಂತ್‌ನಾಗ್‌. ಹಾಗಾಗಿ ಸಿನಿಮಾ ಚೆನ್ನಾಗಿ ಬಂದಿದೆ ಅಂದರೆ, ಅದಕ್ಕೆ ಕಾರಣ ಅವರೇ’ : ನಿರ್ದೇಶಕ ನರೇಂದ್ರಬಾಬು

ವಿಭಿನ್ನ ಕಥಾ ಹಂದರದ  ಚಿತ್ರ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’: ಈ ಚಿತ್ರದ ಕಥಾ ಸಾರಾಂಶ, ಎರಡು ತಲೆಮಾರಿನ ತಳಮಳ ಹಾಗು ತಲ್ಲಣಗಳನ್ನ ಪ್ರಾಮಾಣಿಕವಾಗಿ ಹಿಡಿದಿಡುವ ಪ್ರಯತ್ನ ಮಾಡಿರುವ ಚಿತ್ರ. ಪಬ್ಲಿಕೇಷನ್ ಅಂತ ಜಾಗದಲ್ಲಿ ಸುಮಾರು 40  ವರ್ಷಗಳ ಕಾಲ ದುಡಿದಂಥ ಒಬ್ಬ ವ್ಯಕ್ತಿ, ಪ್ರಸ್ತುತ ಪರಿಸ್ಥಿತಿಯಿಂದಾಗಿ ದಿವಾಳಿ ಎದ್ದ ಕಾರಣ 60  ವಯಸ್ಸಿನ ಆಸುಪಾಸಿನಲ್ಲಿ ಮತ್ತೆ ಕೆಲಸ ಮಾಡುವ ಅನಿವಾರ್ಯತೆ ಬರುತ್ತೆ. ಆ ಸಂದರ್ಭದಲ್ಲಿ ಅವರು ಐಟಿ ಇಂಡಸ್ಟ್ರಿಗೆ ಕೆಲಸಕ್ಕೆಂದು ಹೋದಾಗ, ದಾಂಪತ್ಯವೇ ಜೀವನವೇ ದೇವರು ಎಂದು ತಿಳಿದುಕೊಂಡ ಓರ್ವ ಹಿರಿಯ ಜೀವಿ ಹೊಸತಲೆಮಾರಿನ ಸಂಬಂಧಗಳ ಮೇಲೆ ನಡೆಯುವಂಥ ಪ್ರಯೋಗಗಳ ಬಗ್ಗೆ ಒಂದುತರ ದಿಗ್ಭ್ರಾಂತರಾದರೂ ಅದರಿಂದ ವಿಚಲಿತರಾಗದೇನೆ ಇಡೀ ತನ್ನ ಯುವ ಸಮೂಹವನ್ನೇ ಹತೋಟಿಗೆ ತೆಗೆದುಕೊಳ್ಳುತ್ತಾರೆ ಎಂಬುದೇ ಚಿತ್ರದ ಸಾರಾಂಶ.

ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ರಂಗಭೂಮಿ ಹಿನ್ನೆಲೆಯ ರಾಮಚಂದ್ರ ಹಡಪದ್ ಅವರು ನೀಡಿದ್ದು, ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವಿಜಯ ಪ್ರಕಾಶ್, ಅರ್ಮಾನ್ ಮಲ್ಲಿಕ್, ವರ್ಷ, ವಾಣಿ ಸತೀಶ್, ಶ್ವೇತ ಪ್ರಭು ಹಾಡುಗಳಿಗೆ ಧ್ವನಿಯಾಗಿದ್ದಾರೆ. ವಿನಾಯಕರಾಮ್ ಕಲಗಾರು, ನರೇಂದ್ರ ಬಾಬು ಸಾಹಿತ್ಯ ಬರೆದಿದ್ದಾರೆ.

Also Read  ಉಳ್ಳಾಲ: ಗೃಹ ಪ್ರವೇಶದ ಮನೆಯಲ್ಲಿ ಕಳ್ಳನ ಕೈಚಳಕ

ಗಲ್ಫಿನಲ್ಲಿ ಚಿರಪರಿಚಿತ ಖ್ಯಾತ ಉದ್ಯಮಿಯಾಗಿರುವ ಹರೀಶ್  ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರ್ನಡಿಯಲ್ಲಿ ನಿರ್ಮಿಸಲಾಗಿದ್ದ ‘ಮಾರ್ಚ್-22 ‘ ಸಿನೆಮಾದ ಹಾಡಿನ ಗೀತಾ ರಚನೆಗೆ ಇತ್ತೀಚಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

error: Content is protected !!
Scroll to Top