(ನ್ಯೂಸ್ ಕಡಬ) newskadaba.com ಉಡುಪಿ, ಮೇ.24. ಕೇರಳ ವೈದ್ಯಲೋಕವನ್ನೇ ಬೆಚ್ಚಿಬೀಳಿಸಿದ್ದ ‘ನಿಪಾಃ’ ವೈರಸ್ ಬಗ್ಗೆ ಎಲ್ಲೆಲ್ಲೂ ಆತಂಕದ ಮಾತು ಕೇಳಿ ಬರುತ್ತಿರುವುದರ ನಡುವೆ ಉಡುಪಿಯಲ್ಲಿ ಸಾವಿರಾರು ಬಾವಲಿಗಳ ಮಧ್ಯೆ ವಾಸವಿರುವ ಕುಟುಂಬಗಳ ಸದಸ್ಯರು ಇದೀಗ ಬಾವಲಿ ಜ್ವರದ ಬಗ್ಗೆ ಭಯ ಭೀತರಾಗಿದ್ದಾರೆ.
ಉಡುಪಿಯ ಕಾಪು ಪೇಟೆಯಲ್ಲಿನ ವಿಶ್ವನಾಥ ಶೆಣೈ ಸಂಕೀರ್ಣದ ಹಿಂಬದಿಯಲ್ಲಿರುವ ಹಟ್ಟಿಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಸಾವಿರಾರು ಬಾವಲಿಗಳು ವಾಸವಾಗಿವೆ. ಇದರ ಪಕ್ಕದಲ್ಲೇ ಹಲವು ಕುಟುಂಬಗಳು ಹಿಂದಿನಿಂದಲೂ ಯಾವುದೇ ತೊಂದರೆ ಇಲ್ಲದೆ ವಾಸಿಸುತ್ತಿವೆ. ಆದರೆ ಇದೀಗ ಕೇರಳ ಹಾಗೂ ಕರ್ನಾಟಕ ಕರಾವಳಿಯಲ್ಲಿ ಭೀತಿಯನ್ನು ಸೃಷ್ಟಿಸಿರುವ ಬಾವಲಿಯಿಂದ ಹರಡುವ ‘ನಿಫಾಃ’ ಜ್ವರದ ಭೀತಿಯಲ್ಲಿ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಈ ಬಾವಲಿ ಬಗ್ಗೆಗಿನ ಮಾಹಿತಿಯನ್ನು ಉಡುಪಿ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದ್ದು, ಜಿಲ್ಲಾಧಿಕಾರಿಯವರು ಶೀಘ್ರವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.