(ನ್ಯೂಸ್ ಕಡಬ) newskadaba.com ಜೂ. 10. ಪಿಕಪ್ ವಾಹನವೊಂದು ಪಲ್ಟಿಯಾದ ಪರಿಣಾಮ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಘಟನೆ ಸುಬ್ರಹ್ಮಣ್ಯದಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ಅರಕಲಗೂಡು ನಿವಾಸಿಗಳಾದ ಚಂದ್ರಶೇಖರ್ ಮತ್ತು ಮೋಹನ್ ಎಂದು ಗುರುತಿಸಲಾಗಿದೆ.
ವರದಿಯ ಪ್ರಕಾರ, ಜೂನ್ 13ರಂದು ರಾತ್ರಿ ವೇಳೆ ಪಿಕಪ್ ವಾಹನದಲ್ಲಿ ಎರಡು ಹೋರಿಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ವಾಹನವು ಕುಲ್ಕುಂದದ ಕಡೆಗೆ ಸಂಚರಿಸುತ್ತಿದ್ದಾಗ, ತಿರುವಿನಲ್ಲಿ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ಇದೇ ವೇಳೆ ಪಿಕಪ್ ವಾಹನದಲ್ಲಿ ಎರಡು ಹೋರಿಗಳ ಕಾಲುಗಳನ್ನು ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದ ಆವರಣದ ಸುತ್ತಮುತ್ತ ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣಗಳು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.









