(ನ್ಯೂಸ್ ಕಡಬ) newskadaba.com ಜೂ. 08. ಡೊಮಿನಿಕನ್ ರಿಪಬ್ಲಿಕ್‌ನ ಲಾ ರೊಮಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಖಾಸಗಿ ಜೆಟ್ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
ಅಮೆರಿಕದ ‘ಐಬೊನಿಟೊ ಏವಿಯೇಷನ್‘ ಸಂಸ್ಥೆಗೆ ಸೇರಿದ ‘Gulfstream G200’ ಜೆಟ್ ಟೆಕ್ಸಾಸ್‌ನ ಆಸ್ಟಿನ್‌ಗೆ ಹೊರಟಿತ್ತು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ, ಪೈಲಟ್ ಗಳು ವಿಮಾನವನ್ನು ಮರಳಿ ರನ್‌ವೇ 29ರಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಜೆಟ್, ಪಕ್ಕದ ಹುಲ್ಲುಗಾವಲಿಗೆ ನುಗ್ಗಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಅಪಘಾತದಲ್ಲಿ ಪೈಲಟ್ ಗಳಾದ ಎರಿಕ್ ಜೇವಿಯರ್ ಡಿಯಾಗೋ ಮತ್ತು ರೂಡಿ ಗಜಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ವೇಳೆ ವಿಮಾನದಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅಪಘಾತದ ನಿಖರ ಕಾರಣ ತಿಳಿಯಲು ಡೊಮಿನಿಕನ್ ವಾಯುಯಾನ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.














