ನೂತನ ಸರಕಾರದ ವಿಶ್ವಾಸ ಮತ ಯಾಚನೆಯ ಹಿನ್ನೆಲೆ ► ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.19. ನೂತನ ಸರಕಾರದ ವಿಶ್ವಾಸ ಮತ ಯಾಚನೆಯ ಹಿನ್ನೆಲೆಯಲ್ಲಿ ಗುಂಪು ಸೇರಿ ಗಲಾಟೆಗಳಾಗುವ ಸಂಭವವಿದ್ದು, ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 26 ಗಂಟೆಗಳ ಕಾಲ ನಿಷೇಧಾಜ್ಞೆ ಹೊರಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕೋರಿಕೆಯ ಮೇಲೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.

ಕರಾವಳಿಯು ಈಗಾಗಲೇ ಮತೀಯ ಹಾಗೂ ರಾಜಕೀಯ ವಿಚಾರಗಳಲ್ಲಿ ಅತೀ ಸೂಕ್ಷ್ಮ ಪ್ರದೇಶವಾಗಿದ್ದು, ಸೋಲು – ಗೆಲುವಿನ ಬಗ್ಗೆ ವಿಮರ್ಶೆ ನಡೆಸುತ್ತಿರುವುದು ಕಂಡುಬರುತ್ತಿದೆ. ಈಗಾಗಲೇ ಪರಿಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಸಂದರ್ಭದಲ್ಲಿ ರಾಜಕೀಯ ಹಾಗೂ ಕೋಮು ವಿಚಾರಗಳು ಗಲಭೆಯ ವಾತಾವರಣಕ್ಕೆ ಬದಲಾಗುವ ಸಾಧ್ಯತೆಯಿದೆ. ವಿಶ್ವಾಸ ಮತ ಯಾಚನೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪರ – ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದರಿಂದ ಮೇ 19 ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಮೇ 20 ಭಾನುವಾರ ಬೆಳಿಗ್ಗೆ 10 ಗಂಟೆಯವರೆಗೆ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

error: Content is protected !!
Scroll to Top