ಮೈಸೂರು: ಇವಿಎಂ ಯಂತ್ರವನ್ನು ಹ್ಯಾಕ್ ಮಾಡಿದ ಆರೋಪ ► ನಾಲ್ವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಜೆಡಿಎಸ್ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಮೈಸೂರು, ಮೇ.17. ಮತ‌ ಯಂತ್ರಗಳನ್ನು ಹ್ಯಾಕ್ ಮಾಡಿರುವ ಆರೋಪದಲ್ಲಿ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮತ್ತು ಕಾರ್ಯಕರ್ತರು ನಾಲ್ವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಫಲಿತಾಂಶದ ಬಳಿಕ ಎಸ್ಡಿಪಿಐ ಅಭ್ಯರ್ಥಿಗೆ ನಿರೀಕ್ಷೆಗಿಂತ ಕಡಿಮೆ ಮತಗಳು ಲಭಿಸಿದ ಕಾರಣ ಹಾಗೂ ಜೆಡಿಎಸ್ ಪ್ರಾಬಲ್ಯವಿರುವ ಹಲವು ಪ್ರದೇಶಗಳಲ್ಲಿ ಜೆಡಿಎಸ್ ಗೆ ಅತೀ ಕಡಿಮೆ ಮತ ಲಭಿಸಿರುವುದರಿಂದ ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಚುನಾವಣೆಗೆ ಮೊದಲು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ವೆಂಕಟೇಶ್ ಹಾಗೂ ಮೈಸೂರಿನ ಪ್ರದೀಪ್ ಎಂಬವರು ನರಸಿಂಹರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಝೀಝ್ ಮತ್ತು ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚುನಾವಣೆಯಲ್ಲಿ ಗೆಲ್ಲಿಸಲು 5 ಕೋಟಿ ರೂ. ಗಳ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಣದ ಬೇಡಿಕೆಯಿಟ್ಟಿದ್ದ ಮೈಸೂರಿನ ಪ್ರದೀಪ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಆತ ತಲೆಮರೆಸಿಕೊಂಡಿದ್ದು, ಆತನ ಜೊತೆ ಒಡನಾಟ ಹೊಂದಿದ್ದ ನಾಲ್ವರನ್ನು ಹಿಡಿದು ಅಬ್ದುಲ್ ಅಝೀಝ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಅಬ್ದುಲ್ ಅಝೀಝ್ ನೀಡಿರುವ ದೂರುನಂತೆ ನರಸಿಂಹರಾಜ ಮೊಹಲ್ಲಾ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Also Read  ರೌಡಿಶೀಟರ್ ಪಟ್ಟಿಯಿಂದ ನೂರಕ್ಕೂ ಅಧಿಕ ಮಂದಿಯ ಹೆಸರು ರದ್ದುಗೊಳಿಸಲು ನಿರ್ಧಾರ..!

ನರಸಿಂಹರಾಜ ಕ್ಷೇತ್ರದಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಅಲ್ಲಿನ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಝೀಝ್ ನೀಡಿರುವ ದೂರನ್ನು ಸ್ವೀಕರಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದರೆ ಮತಯಂತ್ರಗಳನ್ನು ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ತನಿಖೆಯಿಂದ ಹ್ಯಾಕ್ ಮಾಡಿರುವುದು ದೃಢಪಡದಿದ್ದಲ್ಲಿ ಆ ಬಗ್ಗೆ ಆರೋಪಿಸಿರುವವರ ವಿರುದ್ಧವೇ ಕ್ರಮ ಜರಗಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

Also Read  ಕಡಬ: ಶಾಲಾ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ ಪ್ರಕರಣಕ್ಕೆ ಟ್ವಿಸ್ಟ್ ➤ ಅಲ್ಲಿ ನಡೆದಿದ್ದೇ ಬೇರೆ

error: Content is protected !!
Scroll to Top