(ನ್ಯೂಸ್ ಕಡಬ) newskadaba.com, ಎ.20: ಕೆಂಪೇಗೌಡ ಇನ್ಸ್‌ಟಿಟ್ಯೂಟ್ ಆಫ್ ಟೌನ್ ಪ್ಲಾನಿಂಗ್ ನಿರ್ಮಾಣಕ್ಕೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳು 2026-27ನೇ ಸಾಲಿನಲ್ಲಿ ತಲಾ 10 ಕೋಟಿ ರು.ನಂತೆ 50 ಕೋಟಿ ರು. ಮೀಸಲಿಡಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಪಾಲಿಕೆಗಳ ಆಯುಕ್ತರು ಇತ್ತೀಚೆಗೆ ಮಂಡಿಸಿದ 2026-27ನೇ ಸಾಲಿನ ಬಜೆಟ್‌ಗೆ ಅನುಮೋದನೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
10 ಕೋಟಿ ರು.ಯಂತೆ ಒಟ್ಟು 50 ಕೋಟಿ ರು
ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳ ಪಾವತಿಗೆ ಐದು ಪಾಲಿಕೆಗಳು ತಲಾ 85 ಕೋಟಿ ರು.ಯನ್ನು ಮೀಸಲಿಟ್ಟಿದೆ. ಅದನ್ನು 75 ಕೋಟಿ ರು.ಗೆ ಮಿತಿಗೊಳಿಸಬೇಕು. ಇದರಲ್ಲಿ ಪ್ರತಿ ಪಾಲಿಕೆಗೆ ಉಳಿಯುವ 10 ಕೋಟಿ ರು.ಯಂತೆ ಒಟ್ಟು 50 ಕೋಟಿ ರು. ಅನ್ನು ಕೆಂಪೇಗೌಡ ಇನ್ಸ್‌ಟಿಟ್ಯೂಟ್ ಆಫ್ ಟೌನ್ ಪ್ಲಾನಿಂಗ್ ನಿರ್ಮಾಣಕ್ಕೆ ಮೀಸಲಿಡಲು ಸೂಚಿಸಲಾಗಿದೆ.
ಹುತ್ತರಿದುರ್ಗದಲ್ಲಿರುವ ನಾಡಪ್ರಭ ಕೆಂಪೇಗೌಡ ಸ್ಮಾರಕ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಐದು ಪಾಲಿಕೆಗಳಿಂದ ತಲಾ 2 ಕೋಟಿ ರು.ಯಂತೆ 10 ಕೋಟಿ ರು. ಒದಗಿಸಲು ತಿಳಿಸಲಾಗಿದೆ. ಮಾಗಡಿಯಲ್ಲಿರುವ ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿಗೆ ಐದು ಪಾಲಿಕೆಗಳಿಂದ ಈ ಸಾಲಿನಲ್ಲಿ 30 ಕೋಟಿ ರು. ಅನುದಾನ ಒದಗಿಸಬೇಕು.
ಕೆಂಪೇಗೌಡ ಜಯಂತಿ ಆಚರಣೆಗೂ ಹಣ ಮೀಸಲಿಡಬೇಕು
ಅಲ್ಲದೇ, ಕೆಂಪೇಗೌಡ ಜಯಂತಿ ಆಚರಣೆಗೆ 369 ವಾರ್ಡ್‌ಗಳಿಂದ ತಲಾ 1 ಲಕ್ಷ ರು.ನಂತೆ 3.89 ಕೋಟಿ ರು. ಮೀಸಲಿಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಆದೇಶದಲ್ಲಿ ತಿಳಿಸಿದೆ









