ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜು: ಪಾಲಕರ ಸಮಾವೇಶ, ಕಂಪ್ಯೂಟರ್ ಕೊಠಡಿ, ತುಳು ಪಠ್ಯ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.09. ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪು.ಕಾಲೇಜಿನಲ್ಲಿ ಪಾಲಕರ ಸಮಾವೇಶ, ನೂತನ ಕಂಪ್ಯುಟರ್ ಕೊಠಡಿ ಹಾಗೂ ತುಳು ಪಠ್ಯ ಉದ್ಘಾಟನಾ ಸಮಾರಂಭ ಜು.7ರಂದು ಬೆಳಿಗ್ಗೆ ರೆ.ಫಾ.ಜೋಸ್ ಮೆಮೋರಿಯಲ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್.,ಮಾತನಾಡಿ, ಮಂಗಳೂರಿನ ಕ್ರಿಶ್ಚನ್ ಪಾಮ್ಪಾಮ್ ವಿದ್ಯಾಸಂಸ್ಥೆಯಲ್ಲಿ 18 ಮಕ್ಕಳಿಗೆ ತುಳು ಭಾಷೆ ಕಲಿಕೆ ಆರಂಭಿಸುವ ಮೂಲಕ ರಾಜ್ಯದಲ್ಲಿ ತುಳುಭಾಷೆ ಪಠ್ಯ ಆರಂಭಗೊಂಡಿದ್ದು ಈಗ ರಾಜ್ಯದಲ್ಲಿ ತೃತೀಯ ಭಾಷೆಯಾಗಿ 36 ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಕಡಬ ತಾಲೂಕಿನಲ್ಲಿ ನೂಜಿಬಾಳ್ತಿಲ ಬೆಥನಿ ಪ.ಪು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತುಳು ಪಠ್ಯ ಆರಂಭಿಸಲಾಗುತ್ತಿದೆ. ಗ್ರಾಮೀಣ ಪ್ರದೇಶವಾದ ನೂಜಿಬಾಳ್ತಿಲದಲ್ಲಿ ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವಿದ್ಯಾರ್ಜನೆ ನೀಡುತ್ತಿರುವ ಬೆಥನಿ ಸಂಸ್ಥೆ ಮಾದರಿಯಾಗಿದೆ. ಇದೀಗ ಇಲ್ಲಿ ತುಳು ಪಠ್ಯವನ್ನು ಆರಂಭಿಸುವ ಮೂಲಕ ತುಳುವನ್ನು ಅವಲಂಭಿಸಿರುವ ಈ ಪ್ರದೇಶದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮುಂದಾಗಿರುವುದು ಶ್ಲಾಘನೀಯ ಎಂದರು.

ಕಂಪ್ಯುಟರ್ ಕೊಠಡಿ ಉದ್ಘಾಟಿಸಿದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ರಾಜ್ಯ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸಮವಸ್ತ್ರ, ಪಠ್ಯ ಪುಸ್ತಕ, ಶೂ ಸೇರಿದಂತೆ ಸ್ಕಾಲರ್ಶಿಪ್, ಬೈಸಿಕಲ್, ಬಿಸಿಯೂಟ, ಕ್ಷೀರಭಾಗ್ಯ ನೀಡುತ್ತಿದೆ. 10ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಗದೆ ಬೇರೆ ಕಡೆ ಖಾಸಗಿಯಾಗಿ ಹಾಸ್ಟೆಲ್ಗಳಲ್ಲಿ ವಿದ್ಯಾರ್ಜನೆ ಪಡೆಯುತ್ತಿದ್ದರೂ ಅವರಿಗೆ ಪ್ರತೀ ತಿಂಗಳಿಗೆ 1500 ರೂ. ಪ್ರೋತ್ಸಾಹಧನ ನೀಡುತ್ತಿದೆ. ಇದರೊಂದಿಗೆ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಶೇ.5 ಮೀಸಲಾತಿ ನೀಡುವುದಾಗಿಯೂ ಸರಕಾರ ಘೋಷಿಸಿದೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಸರಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಪೋಷಕರೂ ಮಕ್ಕಳನ್ನು ಮೊಬೈಲ್ನಿಂದ ದೂರವಿರಿಸಿ ಅವರ ಕಲಿಕೆಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ತುಳು ಪಠ್ಯ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ತುಳು ಅಕಾಡೆಮಿ ಅಧ್ಯಕ್ಷ ಚಂದ್ರಹಾಸ ರೈ, ರಾಜ್ಯದ 36 ಶಾಲೆಗಳಲ್ಲಿ 1647 ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ತುಳು ಕಲಿಯುತ್ತಿದ್ದಾರೆ. ತುಳು ಭಾಷೆ ಕಲಿಯುವುದರಿಂದ ತುಳುಭಾಷೆ, ತುಳು ಸಂಸ್ಕೃತಿ ಬೆಳೆಯಲಿದೆ. ತುಳುನಾಡಿನ ಮಾತೃಭಾಷೆ ತುಳು ಆಗಿದೆ. ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಲ್ಲಿ ತುಳು ನಾಡಿನ ಸಂಸ್ಕೃತಿ, ಸಂಪ್ರದಾಯ ತಿಳಿದುಕೊಳ್ಳಲು ಸಾಧ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ರೆ|ಫಾ| ಪೆರ್ಡಿನಾಂಡ್ ಒಐಸಿ ಮಾತನಾಡಿ, ಶಿಕ್ಷಕರು ತಮ್ಮಲ್ಲಿನ ಜ್ಞಾನವನ್ನೂ ಮಕ್ಕಳಿಗೆ ಧಾರೆ ಎರೆಯುವ ಮೂಲಕ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸಬೇಕು. ಆತ್ಮವಿಶ್ವಾಸ, ಸತ್ಯಧರ್ಮ, ಸಹಿಷ್ಣುತೆ ಕಾಪಾಡಿಕೊಂಡು ಬಂದಲ್ಲಿ ನಾವು ಸತ್ಪ್ರಜೆಗಳಾಗಿ ಬದುಕಲು ಸಾಧ್ಯವಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಸಂತ ಗೌಡ ಮಾರಪ್ಪೆ ಸಂದರ್ಭೋಚಿತವಾಗಿ ಮಾತನಾಡಿದರು. ಸಂಸ್ಥೆಯ ಕೋಶಾಧಿಕಾರಿ ರೆ.ಫಾ.ಅಂಜೆಲೋ ಉಪಸ್ಥಿತರಿದ್ದರು. ಪ್ರಾಂಶುಪಾಲ ಜಾರ್ಜ್ ಟಿ.ಎಸ್.ಸ್ವಾಗತಿಸಿ, ಪ್ರೌಢಶಾಲಾ ಮುಖ್ಯಶಿಕ್ಷಕ ತೋಮಸ್ ಎ.ಕೆ.ವಂದಿಸಿದರು. ಉಪನ್ಯಾಸಕ ಜೋಸೆಫ್ ಟಿ.ಜೆ.ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಿಆರ್ಪಿ ಗೋವಿಂದ ನಾಯ್ಕ್‌, ರೆಂಜಿಲಾಡಿ ಶಾಲಾ ಮುಖ್ಯಶಿಕ್ಷಕ ಮೇದಪ್ಪ ಗೌಡ, ನೂಜಿಬಾಳ್ತಿಲ ತೆಗರ್ ತುಳುಕೂಟದ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ, ನೆಲ್ಯಾಡಿ ಐಕಾನ್ ಕಂಪ್ಯುಟರ್ನ ಮಾಲಕ ಶಾರೂನ್ ಸೇರಿದಂತೆ ಪೋಷಕರು, ಉಪನ್ಯಾಸಕರು,ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
95+ ಯೋಜನೆಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್.,ಹಾಗೂ ನೆಲ್ಯಾಡಿ ಸೈಂಟ್ಜಾರ್ಜ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.,ಇವರನ್ನು ಕಾರ್ಯಕ್ರಮದಲ್ಲಿ ಬೆಥನಿ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

error: Content is protected !!

Join the Group

Join WhatsApp Group