(ನ್ಯೂಸ್ ಕಡಬ) newskadaba.com ಕಡಬ, ಮೇ.14. ತೂಫಾನ್ ಹಾಗೂ ಇಂಡಿಕಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಐವರು ಗಂಭೀರ ಗಾಯಗೊಂಡು, ಹಲವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಸೋಮವಾರದಂದು ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅಲೇರಿ ಎಂಬಲ್ಲಿ ನಡೆದಿದೆ.
ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರ್ಕಳ ಮೂಲದವರಿದ್ದ ತೂಫಾನ್ ಹಾಗೂ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಗೋಕಾಕ್ ಮೂಲದವರಿದ್ದ ಇಂಡಿಕಾ ಕಾರು ನಡುವೆ ಅಲೇರಿ ತಿರುವಿನಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಹದಿನೈದು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು 2-3 ಆಟೋ ರಿಕ್ಷಾ, 108 ಆಂಬ್ಯುಲೆನ್ಸ್ ಮೂಲಕ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಗೆ ಹೊಂದಿಕೊಂಡಂತೆ ತಿರುವಿನ ಒಂದು ಬದಿಯಲ್ಲಿ ನಿಷ್ಕ್ರಿಯಗೊಂಡ ಕೊಳವೆ ಬಾವಿ, ಪಂಪ್ ಶೆಡ್ ಹಾಗೂ ಇನ್ನೊಂದು ಬದಿಯಲ್ಲಿ ವಿದ್ಯುತ್ ಕಂಬವೊಂದಿದ್ದು, ಅಪಘಾತವನ್ನು ಆಹ್ವಾನಿಸಿದಂತಿದೆ.
ಘಟನಾ ಸ್ಥಳಕ್ಕೆ ಕಡಬ ಠಾಣಾ ಪೊಲೀಸ್ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.