(ನ್ಯೂಸ್ ಕಡಬ) newskadaba.com ಕಡಬ, ಮೇ.13. ಇಲ್ಲಿಗೆ ಸಮೀಪದ ನೆಕ್ಕಿತ್ತಡ್ಕದಲ್ಲಿ ಹಾಡುಹಗಲೇ ನಡೆದ ತಲವಾರು ದಾಳಿ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಹುಡುಗಿಯ ವಿಚಾರದಿಂದಾಗಿ ಹಲ್ಲೆಗೈದಿರುವ ಬಗ್ಗೆ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಶಿಶಿಲದ ಕಿರಣ್ ಹಾಗೂ ತಂಡದವರು ಹಲ್ಲೆ ನಡೆಸಿರುವುದು ಎಂದು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಹಲ್ಲೆಗೊಳಗಾದ ಉಮೇಶ್ ಹೇಳಿಕೆ ನೀಡಿದ್ದನೆನ್ನಲಾಗಿದೆ. ಉಮೇಶ್ ಈ ಹಿಂದೆ ಅತ್ಯಾಚಾರ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದು, ಆ ಬಳಿಕ ರಿಕ್ಷಾದಲ್ಲಿ ದುಡಿಯುತ್ತಿದ್ದನೆನ್ನಲಾಗಿದೆ. ಈ ಮಧ್ಯೆ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಯ ಜೊತೆ ಸಂಪರ್ಕದಲ್ಲಿದ್ದು, ಯುವತಿಯ ಚಿಕ್ಕಮ್ಮನ ಮಗ ಕಿರಣ್ ಯುವತಿಯ ತಂಟೆಗೆ ಬರದಂತೆ ಉಮೇಶನಿಗೆ ಎಚ್ಚರಿಕೆ ನೀಡಿದ್ದನೆನ್ನಲಾಗಿದೆ. ಯುವತಿಯು ಶಿಶಿಲದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ನಾಲ್ಕು ತಿಂಗಳ ಹಿಂದೆ ಉಮೇಶ್ ಅಲ್ಲಿಗೆ ತೆರಳಿ ಕಿರುಕುಳ ನೀಡಿ ಬೆದರಿಕೆ ಹಾಕಿದ್ದನೆನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ಹಾಗೂ ತಂಡದಲ್ಲಿದ್ದ ಪ್ರಸಾದ್, ಸತೀಶ್, ಅಶ್ವಥ್, ಅನೀಶ್, ಅಮರನಾಥ್ ಎಂಬವರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ದ್ವೇಷದಲ್ಲಿ ಕಿರಣ್ ಹಾಗೂ ತಂಡ ಭಾನುವಾರದಂದು ಕಾರಿನಲ್ಲಿ ಬಂದು ಅಟೋ ಅಡ್ಡಗಟ್ಟಿ ಉಮೇಶ್ ಅವರಿಗೆ ತಲುವಾರಿನಿಂದ ಕಡಿದು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿದ ಜಿಲ್ಲಾ ಎಸ್ಪಿ ಡಾ.ಬಿ.ಆರ್. ರವಿಕಾಂತೇಗೌಡ, ಹಲ್ಲೆಗೊಳಗಾಗಿರುವ ಉಮೇಶ್ ಹಾಗೂ ಆರೋಪಿ ಕಿರಣ್ ರೌಡಿ ಶೀಟರ್ ಗಳಾಗಿದ್ದು, ಎರಡು ವರ್ಷದ ಹಿಂದೆ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಜೈಲು ಪಾಲಾಗಿದ್ದ ಉಮೇಶ್ ಜೈಲಿನಿಂದ ಹೊರಬಂದ ಬಳಿಕ ಅಪ್ರಾಪ್ತ ಬಾಲಕಿಯ ಜೊತೆ ಸಂಪರ್ಕದಲ್ಲಿದ್ದ ಬಗ್ಗೆ ಬಾಲಕಿಯ ಸೋದರ ಸಂಬಂಧಿ ಕಿರಣ್ ಉಮೇಶನಿಗೆ ಎಚ್ಚರಿಕೆ ನೀಡಿದ್ದ. ಇದರಿಂದ ಬಾಲಕಿಯ ಸೋದರ ಸಂಬಂಧಿ ಕಿರಣ್ ನನ್ನು ಕೊಲೆ ಮಾಡಲು ಕೆಲ ಸಮಯಗಳ ಹಿಂದೆ ಉಮೇಶ್ ಪ್ರಯತ್ನಪಟ್ಟಿದ್ದು, ಉಮೇಶನನ್ನು ಹೀಗೆಯೇ ಬಿಟ್ಟರೆ ತನ್ನನ್ನು ಕೊಲೆ ಮಾಡುತ್ತಾನೆಂದು ತಿಳಿದು ಕಿರಣ್ ಉಮೇಶನ ಕೊಲೆಗೆ ಯತ್ನಿಸಿದ್ದಾನೆ ಎಂದಿದ್ದಾರೆ.
ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮುಸ್ಲಿಮರು: ಉಮೇಶ್ ಗಾಯಗೊಂಡು ಚರಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಯಾರೂ ಹತ್ತಿರಕ್ಕೆ ಬಂದಿರಲಲಿಲ್ಲ, ಈ ಸಂದರ್ಭದಲ್ಲಿ ಸ್ಥಳೀಯರಾದ ಅಬ್ಬಾಸ್ ಹಾಗೂ ನಝೀರ್ ಎಂಬವರು ಗಾಯಾಳುವನ್ನು ವಾಹನವೊಂದರಲ್ಲಿ ಸಾಗಿಸಿ 108 ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಕಡಬ ಎಸ್.ಐ ಪ್ರಕಾಶ್ ದೇವಾಡಿಗ ತಿಳಿಸಿದ್ದಾರೆ.