(ನ್ಯೂಸ್ ಕಡಬ) newskadaba.com, ಮಾ.26: ತನ್ನ ಬದುಕಿನ ದಾರಿ ಸುಗಮಗೊಳಿಸುವ ನೆಪ ಮಾಡಿಕೊಂಡು, ಒಬ್ಬ ಮತ್ತೊಬ್ಬನನ್ನು ಸಾಯಿಸಲು ಕಾರಣ-ನೆಪ ಹುಡುಕುವ ಘಟನೆಗಳನ್ನು ಕಾಲಾಂತರದಲ್ಲಿ ಈ ಜಗತ್ತು ನೋಡಿದೆ! ಶಾಂತಿ ಸ್ಥಾಪನೆ, ಸ್ಥಳೀಯ ಜನರ ಸುರಕ್ಷತೆ ಮುಂತಾದ ಹೆಸರಿನಲ್ಲಿ ಅಮೆರಿಕ, ರಷ್ಯಾ ಮುಂತಾದ ದೇಶಗಳು ನಡೆಸುತ್ತಿರುವ ನರಮೇಧಗಳೂ ನಮ್ಮ ಕಣ್ಣೆದುರು ಇವೆ. ಹೀಗೆ ಸಾಯಿಸುವುದಕ್ಕೆ ನೂರಾರು ಕಾರಣಗಳು, ಸಾವಿರಾರು ಸಮರ್ಥನೆಗಳು.
ಇವೆಲ್ಲವೂ ತಂತಮ್ಮ ಮೂಗಿನ ನೇರಕ್ಕೆ ಮಾತ್ರ ಸರಿ ತೋರುವ ವಿಚಾರಗಳು- ಲೋಕದ ದೃಷ್ಟಿಯಲ್ಲಿ ಇಂತಹವೆಲ್ಲವೂ ಜನರ ಮಾರಣ ಹೋಮ, ಮರಣ ಶಾಸನ, ಅಷ್ಟೇ!
ನೇರ ವಿಷಯಕ್ಕೆ ಬರುತ್ತೇನೆ. ಇದೆಲ್ಲದರ ವಿರಹಿತವಾದ, ಕಾನೂನಿನ ಮಾನ್ಯತೆ ಪಡೆದು, ದೀರ್ಘ ಅನಾರೋಗ್ಯದ ಕಾರಣದಿಂದಾಗಿ, ಹಂತಹಂತವಾಗಿ ರೋಗಿಯೊಬ್ಬನ ಜೀವ ತೆಗೆಯುವ ಪ್ರಕ್ರಿಯೆಯ ಹೆಸರು ದಯಾಮರಣ! ಸಂತ್ರಸ್ತರೊಬ್ಬರು ಜೀವಚ್ಛವವಾಗಿ ಬದುಕಿರುವುದಕ್ಕಿಂತ ಸಾವೇ ಸಾವಿರ ಪಾಲು ಲೇಸು ಎಂಬ ತೀರ್ಮಾನಕ್ಕೆ ಅನಾರೋಗ್ಯ ಪೀಡಿತರ ಪರಿವಾರದವರು ಬಂದು, ಅದನ್ನು ಕಾನೂನು ರೀತಿಯಲ್ಲಿ ದೃಢೀಕರಿಸಿ, ಆ ಮೂಲಕ ಅನಾರೋಗ್ಯ ಪೀಡಿತನ ಕಷ್ಟವನ್ನು ಪರಿಹರಿಸುವ ಪ್ರಕ್ರಿಯೆ ಈ ದಯಾಮರಣ.
13 ದೀರ್ಘ ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಗಾಜಿಯಾಬಾದ್‌ನ ಹರೀಶ್ ರಾಣಾ ಎಂಬವರ ದಯಾಮರಣಕ್ಕೆ ಸುಪ್ರೀಂಕೋರ್ಟ್ ಇತ್ತೀಚೆಗೆ ಅನುಮತಿ ನೀಡಿತು. ಭಾರತದಲ್ಲಿ ಈ ರೀತಿ ದಯಾಮರಣ ಪಡೆದ ಮೊದಲ ಪ್ರಕರಣವಿದು. ಹೀಗೆ ದಯಾ ಮರಣಕ್ಕೆ ಅನುಮತಿ ಪಡೆದು ಮೊನ್ನೆ ಮಂಗಳವಾರ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹರೀಶ್ ರಾಣಾ ಕೊನೆಯುಸಿರೆಳೆದರು..









