(ನ್ಯೂಸ್ ಕಡಬ) newskadaba.com,ಮಾ.19 ಉಪ್ಪಿನಂಗಡಿ: ಕ್ಷೇತ್ರದ ಶಾಸಕರ ನಿರ್ದೇಶನದನ್ವಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಜಾತ್ರೋತ್ಸವದ ಹಿನ್ನೆಲೆಯಲ್ಲಿ ರಥ ಬೀದಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದರೆ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳನ್ನು ಉಪ್ಪಿನಂಗಡಿ ಗ್ರಾ.ಪಂ. ಪಂಚಾಯತ್ ಪಿಡಿಒ ತೆರವುಗೊಳಿಸಿರುವುದು ಅತೀವ ಬೇಸರ ತಂದಿದೆ ಎಂದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್ ತಿಳಿಸಿದ್ದಾರೆ.
ದೇವಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯ ಸಮಯದಲ್ಲಿ ಮಾತನಾಡಿದ ಅವರು, ದೇವಾಲಯದ ಜಾತ್ರೋತ್ಸವಕ್ಕೆ ಊರಿನ ಎಲ್ಲಾ ಧರ್ಮಿಯರೂ ಸಹಕಾರ ನೀಡಿದ್ದು, ಉತ್ತಮವಾಗಿ ಜಾತ್ರೋತ್ಸವ ನಡೆದಿದೆ. ಆದರೆ ಜಾತ್ರೋತ್ಸವವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಬೇಕೆಂದು ಇಲಾಖಾಧಿಕಾರಿಗಳ ಸಮಕ್ಷಮ ಪೂರ್ವಭಾವಿ ಸಭೆಯಲ್ಲಿ ಪುತ್ತೂರು ಶಾಸಕರು ಸೂಚನೆ ನೀಡಿದಂತೆ ಉಪ್ಪಿನಂಗಡಿಯ ರಥಬೀದಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಎರಡು ಮಖೆ ಜಾತ್ರೆ ಕಳೆಯುತ್ತಿದ್ದಂತೆಯೇ ಉಪ್ಪಿನಂಗಡಿಯ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳ ಸಂಪರ್ಕವನ್ನು ಉಪ್ಪಿನಂಗಡಿ ಗ್ರಾ.ಪಂ. ಪಂಚಾಯತ್ ಪಿಡಿಒ ಕತ್ತರಿಸಿ ಹಾಕಿ ಶಾಸಕರ ಸೂಚನೆಗೂ ಬೆಲೆ ಇಲ್ಲದಂತೆ ವರ್ತಿಸಿದ್ದಾರೆ. ಮಾತ್ರವಲ್ಲದೆ ಹೆದ್ದಾರಿ ಬದಿಯಲ್ಲಿ ದೇವಾಲಯಕ್ಕೆ ಸಂಪರ್ಕ ಸಾಧಿಸುವ ರಸ್ತೆಯ ಬಳಿ ಉಪಯೋಗದಲ್ಲಿ ಇಲ್ಲದ ಕುಡಿಯುವ ನೀರಿನ ಘಟಕವನ್ನು ಶಾಸಕರು ಸೂಚನೆ ನೀಡಿದ ಕಾರಣಕ್ಕೆ ತೆರವುಗೊಳಿಸಿರುವುದಕ್ಕೂ ಪಿಡಿಒ ದೇವಾಲಯದ ಆಡಳಿತದೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಸಾರ್ವಜನಿಕ ಹಿತಕ್ಕಾಗಿ ಶಾಸಕರು ಸೂಚನೆ ನೀಡಿದ ಕಾರಣಕ್ಕಾಗಿ ಉಪಯೋಗದಲ್ಲೇ ಇಲ್ಲದ ಅನುಪಯುಕ್ತ ಕಟ್ಟಡವನ್ನು ತೆರವುಗೊಳಿಸಿದ್ದನ್ನು ಈ ರೀತಿ ಆಕ್ಷೇಪಿಸುತ್ತಾರೆ ಎಂದರೆ ನೋವು ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ಘಟಕದ ನೀರು ಶುದ್ಧೀಕರಣ ಉಪಕರಣಗಳನ್ನು ಕಳವು ಮಾಡಿದಾಗ ಯಾವ ಇಲಾಖೆಯು ಮಾತನಾಡಿಲ್ಲ. ಶುದ್ಧೀಕರಣದ ಉಪಕರಣಗಳಿಲ್ಲದೆ ಇಡೀ ಘಟಕವೇ ನಿರುಪಯುಕ್ತವಾದಾಗಲೂ ಯಾವ ಇಲಾಖೆಯೂ ಜೀವಂತಿಕೆಯನ್ನು ತೋರಲಿಲ್ಲ. ಶಾಸಕರು ನೀಡಿದ ಸೂಚನೆಯನ್ನು ಪಾಲಿಸಿದಾಗ ಮಾತ್ರ ಸಂಬಂಧಿತ ಇಲಾಖೆಯ ಮೂಲಕವೇ ಅದನ್ನು ತೆರವುಗೊಳಿಸಬೇಕೆಂಬ ಸೂಚನೆ ಬಂದಿರುವುದು ವಿಪರ್ಯಾಸ. ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹಳಷ್ಟು ನಿಯಮ ಬಾಹಿರ ಕಾಮಗಾರಿಗಳಿಗೆ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿರುವ ಉಪ್ಪಿನಂಗಡಿ ಗ್ರಾ.ಪಂ.ಗೆ ದೇವಾಲಯದ ನಗರಾಲಂಕಾರ ಮಾತ್ರ ಕಣ್ಣಿಗೆ ಕಾಣಿಸಿರುವುದಾ ಎಂದು ವ್ಯವಸ್ಥಾಪನಾ ಸಮಿತಿಯ ಸದಸ್ಯ ವೆಂಕಪ್ಪ ಪೂಜಾರಿ ಪ್ರಶ್ನಿಸಿದರು.
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಆರೋಪದ ಬಗ್ಗೆ ಸ್ಪಷ್ಟನೆ ಬಯಸಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾರೆನ್ಸ್ ವಿಲ್ಫ್ರೆಡ್ ರೋಡ್ರಿಗಸ್ ರವರನ್ನು ಸಂಪರ್ಕಿಸಿದಾಗ, ಪಂಚಾಯತ್ ಕಚೇರಿ ಕಟ್ಟಡ ಎನ್ನುವುದು ಸರಕಾರಿ ಕಟ್ಟಡವಾಗಿದ್ದು, ಅದನ್ನು ಬಳಸಿ ಬಂಟಿಂಗ್ಸ್ ಯಾ ವಿದ್ಯುತ್ ದೀಪವನ್ನು ಅಳವಡಿಸಲು ಯಾವುದೇ ಧರ್ಮಿಯರಿಗೆ ಅವಕಾಶವಿಲ್ಲ. ಇಲ್ಲಿ ಕಟ್ಟಡ ಮುಂಭಾಗ ವಿದ್ಯುತ್ ದೀಪ ಅಳವಡಿಸಿರಲಿಲ್ಲ. ಬದಲಾಗಿ ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಮನಸೋ ಇಚ್ಚೆ ಪಂಚಾಯತ್ ಕಟ್ಟಡದ ಕಂಬಕ್ಕೆ ವಯರ್ ಗಳನ್ನು ಸುತ್ತಿ ವಿದ್ಯುತ್ ದೀಪ ಅಳವಡಿಸಿದ್ದರು. ಸದ್ರಿ ವಿದ್ಯುತ್ ದೀಪ ಅಳವಡಿಸುವ ಸಂಸ್ಥೆಯವರು ಪಂಚಾಯತ್ ಆಡಳಿತದ ಅನುಮತಿಯನ್ನೂ ಕೇಳಿರಲಿಲ್ಲ. ಪಂಚಾಯತ್ ಕಟ್ಟಡದ ಎದುರು ಕಂಬ ಅಳವಡಿಸಿ ವಿದ್ಯುತ್ ದೀಪ ಅಳವಡಿಸಲು ನಮ್ಮ ಯಾವುದೇ ಆಕ್ಷೇಪ ಇರಲಿಲ್ಲ. ಹಾಗೂ ರಸ್ತೆ ಬದಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ನೆಲೆಗಟ್ಟಿನಲ್ಲಿ ಅಳವಡಿಸಲಾದ ಕುಡಿಯುವ ನೀರಿನ ಘಟಕವಿದ್ದ ಕಟ್ಟಡವನ್ನು ದೇವಾಲಯದವರು ತೆರವು ಮಾಡಿದ್ದು ತಪ್ಪು. ಶಾಸಕರು ಹೇಳಿದ್ದಾರೆಂದು ದೇವಾಲಯದವರಿಗೆ ತೆರವು ಮಾಡಲು ಅವಕಾಶವಿಲ್ಲ. ಸಂಬಂಧಿತ ಇಲಾಖೆಯ ಮೂಲಕ ಸದ್ರಿ ಕಟ್ಟಡವನ್ನು ತೆರವುಗೊಳಿಸಲು ಮುಂದಾಗಬೇಕಾಗಿತ್ತು. ಅದನ್ನು ದೇವಾಲಯದ ಆಡಳಿತದವರಿಗೆ ಮನವರಿಕೆ ಮಾಡಿರುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.








