(ನ್ಯೂಸ್ ಕಡಬ) newskadaba.com ಮಾ. 17. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಛೇರಿಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಲಾಯಿತು.
ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಸಿ.ಎಸ್.ಆರ್ ಅನುದಾನದಲ್ಲಿ ಜಿಲ್ಲಾ ಮಹಿಳಾ ಸಂಪನ್ಮೂಲ ಕೇಂದ್ರವನ್ನು ಎಲ್ಲಾ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗಿದ್ದು, ಮಹಿಳಾ ದಿನಾಚರಣೆಯನ್ನು ಆಚರಿಸುವ ಮೂಲಕ ಲೋಕಾರ್ಪಣೆ ಮಾಡಲಾಯಿತು.
ಮುತ್ತೂಟ್ ಫೈನಾನ್ಸ್, ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ ಮತ್ತು ವ್ಯಾಪಾರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ದಿನವು ಕೇವಲ ಆಚರಣೆಯಲ್ಲದೆ, ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ, ರಾಜಕೀಯ ಮತ್ತು ಆರ್ಥಿಕ ರಂಗದಲ್ಲಿ ಸಮಾನ ಪ್ರಾತಿನಿಧ್ಯ ಮತ್ತು ಗೌರವಯುತ ಸ್ವಾತಂತ್ರ್ಯದ ಬದುಕನ್ನು ಕಲ್ಪಿಸಿಕೊಡುವ ಸಂಕಲ್ಪದ ದಿನವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ ಮಾತನಾಡಿ, ಮಹಿಳಾ ದಿನವು ಕೇವಲ ಆಚರಣೆಯ ದಿನವಲ್ಲ, ಮಹಿಳೆಯರ ಸಮಾನತೆ ಮತ್ತು ಗೌರವಕ್ಕಾಗಿ ಸಮಾಜ ಒಟ್ಟಾಗಿ ಕೆಲಸ ಮಾಡುವ ಸಂಕಲ್ಪದ ದಿನವಾಗಿದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಜೊತೆಗೂಡಿ ಕಾರ್ಯನಿರ್ವಹಿಸಿದಾಗ ಪರಿಣಾಮಕಾರಿಯಾದ ಅಭಿವೃದ್ಧಿಯನ್ನು ಸಾಧಿಸಬಹುದು. ಮಹಿಳಾ ಸಂಪನ್ಮೂಲ ಕೇಂದ್ರವು ಜಿಲ್ಲೆಯಲ್ಲಿರುವ ಮಹಿಳೆಯರಿಗೆ ಸೂಕ್ತವಾದ ತರಬೇತಿ ಮತ್ತು ಅಭಿವೃದ್ದಿ ಕಾರ್ಯಕ್ರಮಗಳ ಮಾಹಿತಿಯನ್ನು ನೀಡುವುದರ ಮೂಲಕ ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಿದರು. ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಸಿ.ಎಸ್. ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಮಾತನಾಡಿ, ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮುತೂಟ್ ಫೈನಾನ್ಸ್ ಪಿವಿಎಸ್ ಶಾಖೆಯ ಶಾಖಾ ವ್ಯವಸ್ಥಾಪಕಿ ಗಾಯತ್ರಿ ನಾಯಕ್ ಮತ್ತು ಸಖಿ ಒನ್ ಸ್ಟಾಪ್ ಸೆಂಟರ್ನ ಆಡಳಿತಾಧಿಕಾರಿ ಪ್ರಿಯ ಮಾತನಾಡಿದರು. ಮುತ್ತೂಟ್ ಫೈನಾನ್ಸ್ ವಲಯ ವ್ಯವಸ್ಥಾಪಕ ಸಂದೇಶ್ ಶೆಣೈ, ಶಾಖಾ ವ್ಯವಸ್ಥಾಪಕ ಚಂದ್ರಶೇಖರ್ ಯು, ವಿಜಿಲನ್ಸ್ ಆಫೀಸರ್ ತಾರನಾಥ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಹಿಳಾ ಅಭಿವೃದ್ದಿ ನಿಗಮದ ಅಭಿವೃದ್ದಿ ನಿರೀಕ್ಷಕಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 8 ಮಕ್ಕಳಿಗೆ ಹೊಯ್ಸಳ ಕೆಳದಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಹಿಳಾ ಸಂಪನ್ಮೂಲ ಕೇಂದ್ರ ಹಸ್ತಾಂತರ ಮತ್ತು ಮಹಿಳಾ ಜಾಗೃತಿ ಕಾರ್ಯಕ್ರಮ








