(ನ್ಯೂಸ್ ಕಡಬ) newskadaba.com, ಮಾ.17 ಬಿಲ್ವಪತ್ರೆ-ಮಲ್ಲಿಗೆ ಭೂಸ್ಪರ್ಶ- ಬ್ರಹ್ಮರಥ ಕಟ್ಟುವ ಕೆಲಸ ಆರಂಭ
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಏ.೧೦ರಿಂದ ನಡೆಯಲಿರುವ ‘ಪುತ್ತೂರ್‍ದ ಜಾತ್ರೆಗೆ ಬ್ರಹ್ಮರಥೋತ್ಸವದ ಸಿದ್ಧತೆಗಾಗಿ ಸೋಮವಾರ ರಥಮಂದಿರದಿಂದ ಬ್ರಹ್ಮರಥವನ್ನು ರಥಬೀದಿಗೆ ತರುವ ಮುಹೂರ್ತ ನಡೆಯಿತು. ರಥಕಟ್ಟು ಸ್ಥಳದಲ್ಲಿ ಬಿಲ್ವಪತ್ರೆ ಮತ್ತು ಮಲ್ಲಿಗೆ ಭೂಸ್ಪರ್ಶಗೊಂಡು ಜಾತ್ರೆಗೆ ಪೂರ್ಣಾನುಗ್ರಹ ಸೂಚಿಸುವುದರೊಂದಿಗೆ ಜಾತ್ರೆಯ ಕ್ಷಣಗಣನೆ ಆರಂಭಗೊಂಡಿದೆ.
ಬೆಳಿಗ್ಗೆ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು ಬ್ರಹ್ಮರಥಕ್ಕೆ ಮಲ್ಲಿಗೆ ಪುಷ್ಪ, ಗಂಧ, ಬಿಲ್ವಪತ್ರೆ ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಪ್ರಾರ್ಥಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಅರ್ಚಕರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಆರಂಭದಲ್ಲಿ ದೇವಳದ ನೌಕರರು ರಥದ ಹಿಂಬದಿಯ ಚಕ್ರಕ್ಕೆ ದಂಡೆ ಇಟ್ಟು ಚಕ್ರಕ್ಕೆ ಚಾಲನೆ ನೀಡಿದರು. ಬ್ರಹ್ಮರಥವನ್ನು ಕ್ರೈನ್ ಸಹಾಯದಿಂದ ಹೊರತರಲಾಯಿತು. ಬಳಿಕ ಮಲ್ಲಿಗೆ ಹಾಗೂ ಬಿಲ್ವಪತ್ರೆ ಭೂಸ್ಪರ್ಶಗೊಂಡ ಸ್ಥಳದಲ್ಲಿ ಬ್ರಹ್ಮರಥವನ್ನು ನಿಲ್ಲಿಸಲಾಯಿತು.
ಪುತ್ತೂರ್‍ದಜಾತ್ರೆಗೆ ಏ.೧ರಂದು ಗೊನೆ ಮುಹೂರ್ತ ನೆರವೇರಲಿದೆ. ಏ.೧೦ರಿಂದ ಏ.೨೦ ತನಕ ಜಾತ್ರೆ ನಡೆಯಲಿದೆ. ಇದೀಗ ಬ್ರಹ್ಮರಥ ರಥಬೀದಿಯಲ್ಲಿ ನೆಲೆಗೊಂಡಿದ್ದು, ಇಂದಿನಿಂದ ರಥಕಟ್ಟುವ ಕೆಲಸ ಆರಂಭಗೊಳ್ಳಲಿದೆ. ಅಶ್ವತ್ಥಕಟ್ಟೆಯೂ ಸೇರಿದಂತೆ ರಾಜಾಂಗಣದಲ್ಲಿ ೫ ಕಟ್ಟೆಗಳು ಪುನರ್ ನಿರ್ಮಾಣಗೊಳ್ಳಲಿವೆ.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕಚೇರಿ ಸಹಾಯಕ ಪದ್ಮನಾಭ, ಪಿ.ಜಿ.ಚಂದ್ರಶೇಖರ್, ಕೆಎಸ್ಸಾರ್ಟಿಸಿ ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಎಂ, ವರುಣ್ ಪಂಜಿಗುಡ್ಡೆ, ಕೊಯಿಲ ಪಶುಸಂಗೋಪನಾ ನಿರ್ದೇಶಕ ಡಾ. ಪ್ರಸನ್ನ ಹೆಬ್ಬಾರ್, ಜಯರಾಜ್ ಪಾದುಕ, ಸುಧೀರ್ ಕಲ್ಲಾರೆ, ಗೋಪಾಲ್, ಗಣೇಶ್ ಸಹಿತ ದೇವಳದ ನೌಕರರು ಸೇರಿದಂತೆ ಭಕ್ತವೃಂದ ಉಪಸ್ಥಿತರಿದ್ದರು.
–ಬಾಕ್ಸ್ ಐಟಂ–
ದೇವರ ಪೂರ್ಣಾಗ್ರಹ
ಪ್ರಸ್ತುತ ದೇವಳದ ಸುತ್ತಮುತ್ತದ ಜಾಗವನ್ನು ಸ್ವಾಧೀನ ಪಡಿಸಿಕೊಂಡ ಕಾರಣ ದೇವಳದ ಜಾಗ ವಿಸ್ತಾರಗೊಂಡಿದ್ದು, ಈಗಾಗಲೇ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ೪೦ ಸೆಂಟ್ಸ್ ಸ್ಥಳ ಖರೀದಿ ಮಾಡಲಾಗಿದೆ. ಕಂಬಳದ ಕರೆ ಹಾಗೂ ಕಂಬಳದ ಸ್ಟೇಜ್ ಸ್ಥಳಾಂತರ ಮಾಡಲಾಗುತ್ತಿದೆ. ಹಳೆಯ ಗೋಶಾಲೆ ತೆರವಾದ ಕಾರಣ ವಿಸ್ತಾರವಾದ ಮೈದಾನ ನಿರ್ಮಾಣವಾಗಿದೆ. ಪುತ್ತೂರ್‍ದದ ಜಾತ್ರೆ ಅತ್ಯಂತ ವೈಭವದಿಂದ ನಡೆಯಲು ದೇವರ ಪೂರ್ಣಾಗ್ರಹ ದೊರಕಿದೆ. ಇದರೊಂದಿಗೆ ಭಕ್ತರ ಅಭಿಲಾಷೆ ನೆರವೇರಲಿ ಎಂಬುವುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ -ಪಂಜಿಗುಡ್ಡೆ ಈಶ್ವರ ಭಟ್ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು.
ಪುತ್ತೂರು ಜಾತ್ರೆಗೆ ದೇವರ ಪೂರ್ಣಾನುಗ್ರಹ: ಭಕ್ತರಲ್ಲಿ ಹರ್ಷ








