(ನ್ಯೂಸ್ ಕಡಬ) newskadaba.com, ಮಾ.16: ಎಸ್ಸೆಸ್ಸೆಲ್ಸಿ ಬಳಿಕ ದೂರದ ಪ್ರದೇಶಗಳಲ್ಲಿರುವ ಕಾಲೇಜುಗಳಿಗೆ ತೆರಳಲಾಗದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿರುವ ವಿದ್ಯಾರ್ಥಿನಿಯರಿಗೆ ಸರಕಾರ ಹೊಸ ಯೋಜನೆ ಮೂಲಕ ಸಿಹಿ ಸುದ್ದಿ ನೀಡಿದೆ. ರಾಜ್ಯದ 50 ಸರಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಪರಿವರ್ತಿಸಲು ಅನುಮೋದನೆ ನೀಡಿದೆ. ಈ ಬಾರಿ 100 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಯನ್ನಾಗಿ ಉನ್ನತೀಕರಣಗೊಳಿಸಿರುವ ಸರಕಾರ ಈಗ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲು ಹಸಿರು ನಿಶಾನೆ ನೀಡಿದೆ.
ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳ ಆಯ್ದ 50 ಪ್ರೌಢಶಾಲೆಗಳಲ್ಲಿ ಮೊದಲ ಹಂತದಲ್ಲಿ ಒಂದೆರಡು ಸಂಯೋಜನೆಗಳ ಜತೆ ಪದವಿಪೂರ್ವ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆಗೆ ಅವಕಾಶ ನೀಡಲಾಗಿದೆ. 15 ಕಿ.ಮೀ ವ್ಯಾಪ್ತಿಯಲ್ಲಿ ಸರಕಾರಿ ಪಿಯು ಕಾಲೇಜು ಇಲ್ಲದ ಪ್ರದೇಶಗಳಲ್ಲಿರುವ ಪ್ರೌಢಶಾಲೆಗಳನ್ನು ಕಾಲೇಜುಗಳಾಗಿ ಪರಿವರ್ತಿಸಲಾಗುವುದು. ಮೇಲ್ದರ್ಜೆಗೆ ಆಯ್ಕೆ ಮಾಡುವ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ 40 ವಿದ್ಯಾರ್ಥಿಗಳಿರಬೇಕೆಂಬ ನಿಯಮ ರೂಪಿಸಲಾಗಿದೆ. 10ನೇ ತರಗತಿಯಲ್ಲಿ 100 ವಿದ್ಯಾರ್ಥಿಗಳಿದ್ದರೆ ಅಂತಹ ಪ್ರೌಢಶಾಲೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆ ಮುಗಿದ ಬಳಿಕ ಕಾಲೇಜುಗಳು ಸಮೀಪದಲ್ಲಿ ಇಲ್ಲದ ಕಾರಣ ಬಹುತೇಕ ವಿದ್ಯಾರ್ಥಿನಿಯರು ಪದವಿಪೂರ್ವ ಕಾಲೇಜುಗಳಿಗೆ ದಾಖಲಾಗುತ್ತಿರಲಿಲ್ಲ. ಈಗ ಈ ಹೊಸ ಯೋಜನೆ ಜಾರಿ ಬಳಿಕ ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಕಾಲೇಜುಗಳಿಗೆ ದಾಖಲಾಗುವ ನಿರೀಕ್ಷೆಯಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಪ್ರೌಢಶಾಲೆಗಳನ್ನು ಮೇಲ್ದರ್ಜೆಗೇರಿಸುವ ಘೋಷಣೆ ಮಾಡಲಾಗಿತ್ತು. ಈಗ ಈ ಘೋಷಣೆಯ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆಗೆ ಅನುಮತಿ ದೊರೆತಿದೆ.








