ಮರಣ ಹೊಂದಿದವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ- ಆರೋಪಿಗಳಿಗೆ ಶಿಕ್ಷೆ ಪ್ರಕಟ



(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 14. ಮರಣ ಹೊಂದಿದವರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ವಂಚನೆ ಮಾಡಿದ್ದಲ್ಲದೆ ಸರ್ಕಾರದ ಯೋಜನೆಯ ದುರ್ಲಾಭ ಪಡೆದು ಮೋಸ ಮಾಡಿರುವ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಿಗೆ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.





 

ಆರ್ಯಾಪು ಗ್ರಾಮದ ಮರಿಕೆ ಗುರುವ ಎಂಬವರ ಮಗ ಭಾಸ್ಕರ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಪ್ರಕಾರ, “ತನ್ನ ಅಣ್ಣ ಬಾಬು ಎಂಬವರು, ಅವರ ಮಗಳು ಜ್ಯೋತಿಗೆ ಸರ್ಕಾರದ ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿಸಿ ಕೊಡಲು, ಮೃತಪಟ್ಟಿರುವ ತನ್ನ ತಂದೆ ಗುರುವ ಮತ್ತು ಚಿಕ್ಕಪ್ಪ ಚಲ್ಲ ಅವರ ಜಂಟಿ ಹೆಸರಿನಲ್ಲಿ ಆರ್ಯಾಪು ಗ್ರಾಮದ ಸರ್ವೆ ನಂ.107/1 ಬಿಯಲ್ಲಿರುವ 0.54 ಎಕ್ರೆ ಜಮೀನಿನ ಆರ್‌ಟಿಸಿಯನ್ನಿಟ್ಟು, ಮೃತಪಟ್ಟವರ ಬದಲಾಗಿ ಆರೋಪಿಗಳ ಫೋಟೋವನ್ನು ಅಂಟಿಸಿ, ಸತ್ತವರ ಹೆಬ್ಬೆಟ್ಟಿನ ಬದಲಾಗಿ ಆರೋಪಿಗಳ ಹೆಬ್ಬೆಟ್ಟನ್ನು ನಮೂದಿಸಿ ಫೋರ್ಜರಿ ಜನರಲ್ ಪವರ್ ಆಫ್ ಅಟಾರ್ನಿ ಮಾಡಿಸಿಕೊಂಡು ಆರ್ಯಾಪು ಗ್ರಾ.ಪಂ.ಮೂಲಕ ಸರ್ಕಾರದ ಯೋಜನೆಯಲ್ಲಿ ಮನೆಕಟ್ಟುವ ಬಗ್ಗೆ 1.5 ಲಕ್ಷ ರೂ.ಹಣ ಮಂಜೂರು ಮಾಡಿಸಿಕೊಂಡು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಲ್ಲದೆ, ತನ್ನ ತಂದೆ ಗುರುವ ಅವರ 6 ಜನ ಮಕ್ಕಳು ಹಾಗೂ ಚಿಕ್ಕಪ್ಪ ಚಲ್ಲ ಅವರ 2 ಜನ ಮಕ್ಕಳಿಗೆ ಕೂಡಾ ಈ ಆಸ್ತಿಯಲ್ಲಿ ಅಧಿಕಾರವಿದ್ದರೂ, ಬಾಬು ಮತ್ತು ತನಿಯರವರು ಮರಣ ಹೊಂದಿದವರ ಬದಲಾಗಿ ಅವರಂತೆ ನಟಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತನಗೆ ಹಾಗೂ ತನ್ನ ಕುಟುಂಬಸ್ಥರಿಗೆ ವಂಚಿಸಲು ಪ್ರಯತ್ನಿಸಿದ್ದಲ್ಲದೆ ಸರ್ಕಾರದ ಯೋಜನೆಯ ದುರ್ಲಾಭವನ್ನು ಪಡೆದು ಮೋಸ ಮಾಡಿರುತ್ತಾರೆ”ಎಂದು ಭಾಸ್ಕರ ಅವರು ದೂರಿನಲ್ಲಿ ಆರೋಪಿಸಿದ್ದರು. ಅವರ ದೂರಿನ ಮೇರೆಗೆ ಆರೋಪಿಗಳಾದ ಆರ್ಯಾಪು ಗ್ರಾಮದ ಬಾಬು ಮರಿಕೆ ಅವರ ಮಗಳು ಜ್ಯೋತಿ ಮರಿಕೆ ಮತ್ತು ಶಾಂತಿಗೋಡು ಗ್ರಾಮದ ಪಜಿರೋಡಿಯ ತನಿಯ ಎಂಬವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.






ಪುತ್ತೂರು ಗ್ರಾಮಾಂತರ ಠಾಣೆಯ ಆಗಿನ ಪೊಲೀಸ್ ಉಪ ನಿರೀಕ್ಷಕ ಉದಯರವಿ ಮತ್ತು ಸಕ್ತಿವೇಲುರವರು ತನಿಖೆ ನಡೆಸಿ ಆರೋಪಿತರ ವಿರುದ್ಧ ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯವು ಆರೋಪಿಗಳಿಗೆ 3 ವರ್ಷ ಸದಾ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಕಾಲ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ. ಸರ್ಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಕುಮಾರಿ ಚೇತನಾ ದೇವಿರವರು ವಾದಿಸಿದ್ದರು

error: Content is protected !!
Scroll to Top