(ನ್ಯೂಸ್ ಕಡಬ) newskadaba.com, ಮಾ.12,ಗದಗ ಇತಿಹಾಸ ಪ್ರಸಿದ್ಧ ಲಕ್ಕುಂಡಿಯ ಪಾರಂಪರಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ನಡೆಯುತ್ತಿದ್ದ ಬೃಹತ್ ಉತ್ಖನನ ಕಾರ್ಯಕ್ಕೆ ಬುಧವಾರ ಅಧಿಕೃತವಾಗಿ ತೆರೆಬಿದ್ದಿದೆ. ಕಳೆದ 47 ದಿನಗಳಿಂದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆದ ಈ ಕಾರ್ಯಾಚರಣೆಯಲ್ಲಿ ಹತ್ತಾರು ಪ್ರಾಚೀನ ಅವಶೇಷಗಳು ಪತ್ತೆಯಾಗಿದ್ದು, ಇತಿಹಾಸ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿವೆ.
ಜನವರಿ 10ರಂದು ಗಂಗವ್ವ ರಿತ್ತಿ ಎಂಬುವವರ ಜಾಗದಲ್ಲಿ ನಿಧಿ ಪತ್ತೆಯಾದ ಬೆನ್ನಲ್ಲೇ, ASI ಮತ್ತು ರಾಜ್ಯ ಪುರಾತತ್ವ ಇಲಾಖೆ ಜಂಟಿಯಾಗಿ ಈ ಕಾರ್ಯಾಚರಣೆ ಆರಂಭಿಸಿದ್ದವು.ಸುಮಾರು 14 ಅಡಿ ಆಳದವರೆಗೆ ನಡೆದ ಉತ್ಖನನದಲ್ಲಿ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಲಭ್ಯವಾಗಿವೆ. ಇಲ್ಲಿ ಪುರಾತನ ಕೋಟೆಗೋಡೆಯ ತಳಪಾಯ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.ಮಾ. 30ರಂದು ವೀರಭದ್ರೇಶ್ವರ ಜಾತ್ರೆ ನಡೆಯಲಿರುವ ಕಾರಣ, ಸಾರ್ವಜನಿಕರ ಹಿತದೃಷ್ಟಿಯಿಂದ ಉತ್ಖನನ ನಡೆದ ಸ್ಥಳವನ್ನು ಪ್ಲಾಸ್ಟಿಕ್ ತಾಡಪತ್ರಿ ಮತ್ತು ಮಣ್ಣು ಹಾಕಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಅವರು ಮಾತನಾಡಿ, “ಕೇಂದ್ರ ಸರ್ಕಾರದ ಅನುಮತಿ ಪಡೆದು ಗ್ರಾಮದ ಇನ್ನೂ 6ರಿಂದ 8 ಕಡೆಗಳಲ್ಲಿ ಉತ್ಖನನ ನಡೆಸುವ ಉದ್ದೇಶವಿದೆ” ಎಂದಿದ್ದಾರೆ. ಅಲ್ಲದೆ, ಲಕ್ಕುಂಡಿಯನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾಧಿಕಾರದ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ತಿಳಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಕಳೆದ 47 ದಿನಗಳಿಂದ ಇತಿಹಾಸವನ್ನು ಅಗೆದು ತೆಗೆಯುವ ಕೆಲಸ ನಡೆದಿತ್ತು. ಜನವರಿ 10ಕ್ಕೆ ಆರಂಭವಾದ ಈ ಉತ್ಖನನದಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ಅಪರೂಪದ ವಸ್ತುಗಳು ಪತ್ತೆಯಾಗಿವೆ.












