ಶಾಲೆಗೆ ತೆರಳುತ್ತಿದ್ದ ಮಕ್ಕಳ ಆಟೋಗೆ ಕಾರು ಢಿಕ್ಕಿ: ತಪ್ಪಿದ ಭಾರಿ ಅನಾಹುತ



(ನ್ಯೂಸ್‌ ಕಡಬ) newskadaba.com,ಮಾ.10: ವೇಗವಾಗಿ ಬಂದ ಕಾರೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಒಂದೇ ಕುಟುಂಬದ ಐವರು ಮಕ್ಕಳು ಹಾಗೂ ಆಟೋ ಚಾಲಕರಾದ ಅವರ ತಂದೆ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿಯಲ್ಲಿ ಸೋಮವಾರ ಸಂಜೆ ನಡೆದಿದೆ.





ಗಾಯಾಳುಗಳನ್ನು ಆಟೋ ಚಾಲಕ ಕಲಂದರ್ ಶಾಫಿ ಮತ್ತು ಅವರ ಮಕ್ಕಳಾದ ಮಹಮ್ಮದ್ ಜಾಝೀರ್ (13), ಮಹಮ್ಮದ್ ಇರ್ಷಾದ್ (11), ಮಹಮ್ಮದ್ ರಾಝೀಕ್ (9), ಮಹಮ್ಮದ್ ನೂರ್ (5) ಮತ್ತು ಸಝ್ಮಾ (4) ಎಂದು ಗುರುತಿಸಲಾಗಿದೆ. ಇವರಲ್ಲಿ ಕಲಂದರ್ ಶಾಫಿ, ಸಝ್ಮಾ ಮತ್ತು ಮಹಮ್ಮದ್ ಜಾಝೀರ್ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.






ಕಲಂದರ್ ಶಾಫಿ ಅವರು ಉಪ್ಪಿನಂಗಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು 34 ನೆಕ್ಕಿಲಾಡಿಯ ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪಿನಂಗಡಿ ಕಡೆಗೆ ಅತೀ ವೇಗವಾಗಿ ಬಂದ ಕಾರು, ಸರ್ವಿಸ್ ರಸ್ತೆಗೆ ನುಗ್ಗಿ ಆಟೋ ರಿಕ್ಷಾಕ್ಕೆ ನೇರವಾಗಿ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ರಸ್ತೆಯಲ್ಲೇ ಉರುಳಿ ಬಿದ್ದಿದ್ದು, ಒಳಗಿದ್ದ ಆರೂ ಮಂದಿಗೆ ಗಾಯಗಳಾಗಿವೆ. ಕಾರು ಚಾಲಕನ ನಿರ್ಲಕ್ಷ್ಯ ಹಾಗೂ ಅತಿ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

error: Content is protected !!
Scroll to Top