(ನ್ಯೂಸ್ ಕಡಬ) newskadaba.com ಕಡಬ, ಜು.08. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಕಾಲೋನಿ ಸಮೀಪದಲ್ಲಿ ಆರಂಭಗೊಳ್ಳಲಿದೆ ಎನ್ನಲಾದ ಮದ್ಯದಂಗಡಿಗೆ ದಲಿತ ಮುಖಂಡೆ ಕಮಲ ಅಕ್ಷೇಪ ವ್ಯಕ್ತಪಡಿಸಿದ್ದು ವಿರೋಧದ ನಡುವೆ ಆರಂಭಗೊಂಡಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅವರು ಶನಿವಾರ ಕಡಬದಲ್ಲಿ ನಡೆದ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿ, ಸುಪ್ರಿಂಕೋರ್ಟ್ ಆದೇಶದಿಂದ ನೆಲ್ಯಾಡಿ ಸಮೀಪದ ಉದನೆಯಲ್ಲಿ ಮುಚ್ಚಲ್ಪಟ್ಟ ಬಾರೊಂದು ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಕಾಲೋನಿಯ ಅನತಿ ದೂರದಲ್ಲಿ ಪ್ರಾರಂಭಗೊಳ್ಳಲಿರುವ ಬಗ್ಗೆ ಗುಮಾನಿ ಇದೆ. ಈ ನಿಟ್ಟಿನಲ್ಲಿ ನೂಜಿಬಾಳ್ತಿಲ ಪಂಚಾಯಿತಿಗೆ ಈಗಾಗಲೇ ಅನುಮತಿ ನೀಡದಂತೆ ಆಗ್ರಹಿಸಿ ಮನವಿ ನೀಡಲಾಗಿದೆ. ಮದ್ಯದಂಗಡಿ ಆರಂಭಗೊಳ್ಳಲಿದೆ ಎನ್ನುವ ಜಾಗದ ಸಮೀಪದಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಹಾಲಿನ ಸೊಸೈಟಿಯಿದ್ದು ಜನನಿಬಿಡ ಪ್ರದೇಶವಾಗಿದೆ. ಬಾರ್ ಆರಂಭಗೊಂಡಲ್ಲಿ ಈ ಭಾಗದ ಅನೇಕ ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನ ಕಳೆದುಕೊಳ್ಳಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಈಗಾಗಲೇ ಮದ್ಯವರ್ಜನ ಶಿಬಿರದ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಿಸಲು ಹೊರಟಿದ್ದಾರೆ. ಈ ಕಾರ್ಯಕ್ಕೆ ಪ್ರೇರಣೆ ನೀಡುವ ಬದಲಾಗಿ ಇಲ್ಲಿ ಮದ್ಯದಂಗಡಿ ಆರಂಭಿಸಿ ಈ ಪ್ರದೇಶದಲ್ಲಿ ನೆಮ್ಮದಿ ಕದಡುವಂತೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ವಿರೋಧದ ನಡುವೆಯೂ ಮದ್ಯದಂಗಡಿ ಆರಂಭಗೊಂಡಲ್ಲಿ ಈ ಭಾಗದ ಜನರನ್ನು ಒಗ್ಗೂಡಿಸಿ ಉಗ್ರರೀತಿಯಲ್ಲಿ ಪ್ರತಿಭಟಿಸಲಾಗುವುದು ಎಚ್ಚರಿಕೆ ನೀಡಿದರು. ಪತ್ರೀಕಾಗೋಷ್ಟಿಯಲ್ಲಿ ಸ್ರ್ತೀಶಕ್ತಿ ಸಂಘದ ಕಾರ್ಯದರ್ಶಿ ರೂಪ ಕಲ್ಲುಗುಡ್ಡೆ, ಸ್ತ್ರೀ ಶಕ್ತಿ ಸಂಘದ ಗೊಂಚಲು ಸಮಿತಿ ಕಾರ್ಯದರ್ಶಿ ಶಾಲಿನಿ ಕಲ್ಲುಗುಡ್ಡೆ ಉಪಸ್ಥಿತರಿದ್ದರು.