(ನ್ಯೂಸ್ ಕಡಬ) newskadaba.com,ಫೆ.23: ನೂತನ ವಸ್ತ್ರಮಳಿಗೆಯೊಂದನ್ನು ತೆರೆಯುವ ಸಂಭ್ರಮದಲ್ಲಿದ್ದ ಯುವಕನೋರ್ವ ಅದೇ ಮಳಿಗೆಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ತೊಕ್ಕೊಟ್ಟುವಿನ ಹೃದಯಭಾಗದಲ್ಲಿ ನಡೆದಿದೆ. ಮೂಲತ: ಪಜೀರು ಬೆಂಗೋಡಿ ಪದವು ನಿವಾಸಿ, ಸದ್ಯ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿರುವ ಸಲ್ಮಾನ್ ಫಾರಿಶ್ (20) ಮೃತ ಯುವಕ.
ತೊಕ್ಕೊಟ್ಟಿನ ವಾಣಿಜ್ಯ ಮಳಿಗೆಯೊಂದರಲ್ಲಿ ಸಲ್ಮಾನ್ ಫಾರಿಶ್ ಮಾಲಕತ್ವದಲ್ಲಿ ನೂತನ ವಸ್ತ್ರ ಮಳಿಗೆಯೊಂದು ಇದೇ ಶುಕ್ರವಾರ ಶುಭಾರಂಭಗೊಳ್ಳಲಿದ್ದು, ಆ ನಿಟ್ಟಿನಲ್ಲಿ ನೂತನ ಮಳಿಗೆಯ ಒಳ ವಿನ್ಯಾಸ ಕೆಲಸ ನಡೆಯುತ್ತಿತ್ತು. ಭಾನುವಾರ ರಾತ್ರಿಯೂ ಮಳಿಗೆಯ ಒಳಗಡೆ ಇಲೆಕ್ಟ್ರಿಕಲ್ ಕೆಲಸ ಭರದಲ್ಲಿ ನಡೆಯುತ್ತಿತ್ತು.
ಭಾನುವಾರ ನಡುರಾತ್ರಿ ಸುಮಾರು 1.30 ಘಂಟೆ ವೇಳೆ ಸಲ್ಮಾನ್ ಗೆ ವಿದ್ಯುತ್ ಆಘಾತವಾಗಿದ್ದು,ಮಳಿಗೆಯೊಳಗಿದ್ದ ಕಾರ್ಮಿಕರು ಕೂಡಲೇ ಆತನನ್ನ ಆಟೋ ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಸಹ ಆಸ್ಪತ್ರೆಯ ದಾರಿ ಮಧ್ಯೆ ಸಲ್ಮಾನ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








