(ನ್ಯೂಸ್ ಕಡಬ) newskadaba.com,ಫೆ.23: ಪಶ್ಚಿಮ ಬಂಗಾಳ ರಾಜಕೀಯದ ಪ್ರಮುಖ ಮುಖ ಹಾಗೂ ‘ರಾಜಕೀಯ ಚಾಣಕ್ಯ’ ಎಂದೇ ಖ್ಯಾತರಾಗಿದ್ದ ಮುಕುಲ್ ರಾಯ್ (71) ಅವರು ಇಂದು ಬೆಳಗಿನ ಜಾವ ನಿಧನರಾದರು. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 1.30ರ ಸುಮಾರಿಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಾಜಿ ರೈಲ್ವೆ ಸಚಿವರಾಗಿದ್ದ ರಾಯ್, ಒಂದು ಕಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕರಾಗಿದ್ದು, ಪಕ್ಷದ ಎರಡನೇ ನಾಯಕನಂತೆ ಪರಿಗಣಿಸಲ್ಪಟ್ಟಿದ್ದರು. ಕಳೆದ ಎರಡು ವರ್ಷಗಳಿಂದ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಕೋಮಾಗೆ ಜಾರಿದ್ದ ಅವರು ನೆನಪಿನ ಶಕ್ತಿಯನ್ನೂ ಕಳೆದುಕೊಂಡಿದ್ದರು. ಪರಿಚಿತ ಮುಖಗಳನ್ನು ಗುರುತಿಸಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ರೈಲ್ಸ್ ಟ್ಯೂಬ್ ಮೂಲಕ ದ್ರವ ಆಹಾರ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.












