ತಮಿಳು ಕಾರ್ಮಿಕರು ಬಿಜೆಪಿ ಪರವಾಗಿದ್ದಾರೆ ಎಂಬ ಹೇಳಿಕೆಗೆ ಖಂಡನೆ ​► ತಮಿಳರು ಎಂದೆಂದಿಗೂ ಕಷ್ಟಕಾಲದಲ್ಲಿ ನೆರವಾಗಿರುವ ಕಾಂಗ್ರೆಸ್ ಪರ: ರಾಜಕೃಷ್ಣ ಎಸ್.

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟಗಳಲ್ಲಿ ದುಡಿಯುತ್ತಿರುವ ತಮಿಳು ಕಾರ್ಮಿಕರು ತಮ್ಮ  ಕಷ್ಟಕಾಲದಲ್ಲಿ ನೆರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಯನ್ನು ಬೆಂಬಲಿಸುವುದು ಸಾಧ್ಯವೇ ಇಲ್ಲ. ನಾವು ಎಂದೆಂದಿಗೂ ಕಾಂಗ್ರೆಸ್ ಬೆಂಬಲಿಗರು ಎಂದು ತಮಿಳು ಕಾರ್ಮಿಕರ ಕಾಂಗ್ರೆಸ್ ಘಟಕದ ಕಡಬ ತಾಲೂಕು ಸಮಿತಿಯ ಅಧ್ಯಕ್ಷ ರಾಜಕಷ್ಣ  ಎಸ್. ಅವರು ಹೇಳಿದರು.

ಅವರು ಗುರುವಾರ ಕಡಬದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ತಮಿಳು ಕಾರ್ಮಿಕರು ಬಿಜೆಪಿ ಪರವಾಗಿದ್ದಾರೆ. ಬಿಜೆಪಿಯಿಂದಾಗಿ ನಮಗೆ ಹಲವು ಸವಲತ್ತು ಸಿಕ್ಕಿದೆ ಎನ್ನುವ ತಮಿಳು ಕಾರ್ಮಿಕರ ಬಿಜೆಪಿ ಘಟಕದ ಹೇಳಿಕೆಯನ್ನು ಖಂಡಿಸಿದ ಅವರು ಕೇವಲ ಬೆರಳೆಣಿಕೆಯ ಮಂದಿ ಮಾತ್ರ ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಯ ಹಿಂದೆ ಹೋಗಿದ್ದಾರೆ. ಆದರೆ ದೊಡ್ಡ ಸಂಖ್ಯೆಯ ತಮಿಳು ಕಾರ್ಮಿಕರು ಕಾಂಗ್ರೆಸ್ ಪಕ್ಷದ ಜೊತೆಗಿದ್ದಾರೆ. ನಮ್ಮ ಪ್ರಮುಖ ಬೇಡಿಕೆಗಳಾದ ಬಿಪಿಎಲ್ ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ, ಮೂರನೇ ತಲೆಮಾರಿನವರಿಗೆ ಕೆಲಸ ಮತ್ತು ವಸತಿ ಸಮಸ್ಯೆ ಕುರಿತು ಕಳೆದ 20 ವರ್ಷಗಳಿಂದ ಆಯ್ಕೆಯಾಗಿರುವ ಬಿಜೆಪಿ ಪಕ್ಷದ ಸಂಸದರು ಹಾಗೂ ಶಾಸಕರು ಇದುವರೆಗೂ ಸ್ಪಂದಿಸಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಯಾವುದೇ ಪ್ರಯತ್ನ ಮಾಡದಿರುವ ಬಿಜೆಪಿಯವರಿಗೆ ಚುನಾವಣೆಯ ವೇಳೆ ಮಾತ್ರ ತಮಿಳು ಕಾರ್ಮಿಕರ ನೆನಪಾಗುತ್ತದೆ. ಚುನಾವಣೆಯ ವೇಳೆ ಸುಳ್ಳು ಹೇಳಿಕೆಗಳನ್ನು ಕೊಡುವ ಮೂಲಕ ತಮಿಳರ ಮತಗಳನ್ನು ಪಡೆಯಲು ಬಿಜೆಪಿಗರು ಸಂಚು ರೂಪಿಸುತ್ತಿದ್ದಾರೆ. ಜಾತಿ ಪ್ರಮಾಣಪತ್ರಕ್ಕಾಗಿ ನಾವು ಸುಳ್ಯದಲ್ಲಿ ಸುಮಾರು 87 ದಿನಗಳ ಆಹೋರಾತ್ರಿ ಧರಣಿ ನಡೆಸಿದಾಗ ಅತ್ತ ತಲೆ ಹಾಕದ ಬಿಜೆಪಿಯ ಸಂಸದರು ಹಾಗೂ ಶಾಸಕರು ಈಗ ನಾವು ಜಾತಿಪ್ರಮಾಣಪತ್ರ ಕೊಡಲು ಕಾರಣ ಎನ್ನುತ್ತಿರುವುದು ಹಾಸ್ಯಾಸ್ಪದ ವಿಚಾರ. ಆ ಸಂದರ್ಭದಲ್ಲಿ ನಮ್ಮ ನೆರವಿಗೆ ಬಂದವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಡಾ|ರಘು ಹಾಗೂ ಕಾಂಗ್ರೆಸ್ ನಾಯಕರು. ಅದರಂತೆ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ ನಮಗೆ ಜಾತಿ ಪ್ರಮಾಣ ಪತ್ರ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಬಿಜೆಪಿಯ ಯಾವ ಹೈಪವರ್ ಕಮಿಟಿಯೂ ನಮಗೆ ಪ್ರಯೋಜನಕ್ಕೆ ಬರಲಿಲ್ಲ. ನಾವು ಸರಕಾರಿ ಉದ್ಯೋಗಿಗಳಾದರೂ ದಿನಕೂಲಿ ಕಾರ್ಮಿಕರಾಗಿರುವ ಕಾರಣ ನಮಗೆ ಬಿಪಿಎಲ್ ಪಡಿತರ ಚೀಟಿ ಪಡೆಯಲು ಇದ್ದ ತೊಡಕುಗಳನ್ನು ಸರಿಪಡಿಸಿ ಕಾಂಗ್ರೆಸ್ ನೇತೃತ್ವದ ಸರಕಾರ ಬಿಪಿಎಲ್ ಪಡಿತರ ಚೀಟಿ ನೀಡಿದೆ. ಬಿಜೆಪಿ ತಮಿಳು ಕಾರ್ಮಿಕರ ಘಟಕ ಹೇಳಿರುವಂತೆ 16 ಮಂದಿ ತಮಿಳು ಕಾರ್ಮಿಕರನ್ನು ಕೆಲಸದಿಂದ ತೆಗೆದಿಲ್ಲ. ನಿಗಮದ ಆಡಳಿತಾತ್ಮಕ ಚಟುವಟಿಕೆಯಂತೆ ಅವರಿಗೆ ವರ್ಗಾವಣೆ ಆಗಿದೆ ಎಂದು ಹೇಳಿದ ರಾಜಕೃಷ್ಣ ನಮಗೆ ಇಷ್ಟೆಲ್ಲಾ ಸಹಾಯ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲವೇ ಹೊರತು ಬಿಜೆಪಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

Also Read  ಅಕ್ರಮ ಮರಳು ಸಾಗಾಟ- ಇಬ್ಬರ ಸೆರೆ

ಪತ್ರಿಕಾಗೋಷ್ಠಿಯಲ್ಲಿ ತಮಿಳು ಕಾರ್ಮಿಕರ ಕಾಂಗ್ರೆಸ್ ಘಟಕದ ಕಡಬ ತಾಲೂಕು ಸಮಿತಿಯ ಗೌರವಾಧ್ಯಕ್ಷ ಕ್ರಿಸ್ತುನಾಥನ್, ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಉಪಾಧ್ಯಕ್ಷ ರಾಜರತ್ನ, ಸದಸ್ಯರಾದ ಉಳಗನಾಥನ್, ಮಣಿಮಾರನ್, ಹನುಮಂತ, ವಿ.ಕುಮಾರ್, ಶಿವಪಾಲನ್ ಕೊಣಾಜೆ, ಸತ್ಯಶೀಲನ್ ಬೆತ್ತೋಡಿ, ಮುರುಗಯ್ಯ ಬಳ್ಪ, ರಾಜೇಂದ್ರ ಬೆತ್ತೋಡಿ, ಈಶ್ವರನ್ ಕೊಣಾಜೆ, ನಾರಾಯಣ ಸ್ವಾಮಿ ಬೆತ್ತೋಡಿ, ಶಶಿಕುಮಾರ್, ಮುತ್ತುಕುಮಾರಿ, ಬಾಲಸುಬ್ರಹ್ಮಣ್ಯ ಕಲ್ಲಾಜೆ, ರಾಜಗೋಪಾಲ ಕೊಣಾಜೆ, ನಟರಾಜ್ ಬೆತ್ತೋಡಿ ಮುಂತಾದವರು ಉಪಸ್ಥಿತರಿದ್ದರು.

Also Read  ಓವರ್ ಟೇಕ್ ಭರದಲ್ಲಿ ಡಿವೈಡರ್ ಮೇಲೇರಿದ ಬಸ್

error: Content is protected !!
Scroll to Top