(ನ್ಯೂಸ್ ಕಡಬ) newskadaba.com ಫೆ.19 ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಅವರು ಸುಳ್ಯ ತಾಲೂಕು ಪಂಚಾಯಿತಿಯ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಅರಂತೋಡು ಗ್ರಾಮದ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಿ, ಅಡ್ತಲೆ ಪ್ರದೇಶದಲ್ಲಿ ನಿರಂತರವಾಗಿ ಆಗುತ್ತಿರುವ ಆನೆ ಹಾವಳಿಯಿಂದ ಅಡ್ತಲೆ ಭಾಗದಲ್ಲಿ ಕೃಷಿಕರು, ಗ್ರಾಮಸ್ಥರು ಬದುಕು ನಡೆಸಲು ಆತಂಕಪಡುವಂತಾಗಿದೆ.
ಸಂಜೆಯಾಗುತ್ತಲೆ ಕಾಡಾನೆಗಳು ರಸ್ತೆಗೆ ಇಳಿದು, ಜನವಸತಿ ಪ್ರದೇಶಕ್ಕೆ ಬರುತ್ತಿವೆ, ಇತ್ತೀಚೆಗೆ ನಾವು ಸಮಾಲೋಚನಾ ಸಭೆ ನಡೆಸಿ ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ನಿರ್ಣಯ ಕೈಗೊಂಡಿದ್ದೇವೆ, ಆದ್ದರಿಂದ ಆನೆ ಹಾವಳಿ ತಡೆಗಟ್ಟಲು, ಶಾಶ್ವತ ಪರಿಹಾರ ಕ್ರಮ ಯೋಜಿಸಲು ಶಾಸಕರ ನೇತೃತ್ವದಲ್ಲಿ ಅರಣ್ಯ ಇಲಾಖೆ ಜೊತೆಗೂಡಿ ಡಿಸಿಎಫ್, ಎಸಿಎಫ್ ಸಮ್ಮುಖದಲ್ಲಿ ಅಡ್ತಲೆಯಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ ನಡೆಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಕಡಬದಲ್ಲಿ ಅಧಿಕಾರಿಯೋರ್ವರು ಲಂಚ ಸ್ವೀಕಾರಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೋಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಕಡಬದಲ್ಲಿ ತಾಲೂಕು ಕಚೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಧಿಕಾರಿಗಳನ್ನು ಕರೆಸಿ ಸಾರ್ವಜನಿಕರಿಗೆ ಉತ್ತಮ ಹಾಗೂ ಕ್ಲಪ್ತ ಸಮಯದಲ್ಲಿ ಕೆಲಸ ಮಾಡಿಕೊಡುವಂತೆ ನಿರಂತರ ಸೂಚಿಸುತ್ತಿದ್ದೇನೆ. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವುದು ಕಂಡುಬಂದಲ್ಲಿ, ಅವರ ವಿರುದ್ಧ ದೂರು ಬಂದಲ್ಲಿ ಸೂಕ್ತ ಕ್ರಮ ವಹಿಸುತ್ತೇನೆ, ಕಡಬದ ವಿಚಾರದ ಬಗ್ಗೆಯೂ ಸಂಬಂಧಿಸಿದವರಿಂದ ಮಾಹಿತಿ ಪಡೆಯುತ್ತೇನೆ ಎಂದರು.








