(ನ್ಯೂಸ್ ಕಡಬ) newskadaba.com, ಫೆ.13: ಸತತ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದು, ಈ ಏರಿಕೆಯ ಓಟಕ್ಕೆ ಗುರುವಾರ ಅಂದರೆ ನಿನ್ನೆ ಬ್ರೇಕ್ ಬಿದ್ದಿತ್ತು. ಆದರೆ ಬೆಳ್ಳಿ ಬೆಲೆಯಲ್ಲಿ ನಿನ್ನೆ ಕೊಂಚ ಏರಿಕೆ ಕಂಡಿತ್ತು. ಆದರೆ ಇದೀಗ ಶುಕ್ರವಾರ ಚಿನ್ನ ಹಾಗೂ ಬೆಳ್ಳಿ ಖರೀದಿಸುವವರ ಪಾಲಿಗೆ ಶುಭಶುಕ್ರವಾರವಾಗಿ ಪರಿಣಮಿಸಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮಹಾ ಕುಸಿತ ಕಂಡಿದೆ.
ಗುರುವಾರ 24 ಕ್ಯಾರಟ್ ಪ್ರತಿ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 1,200 ರುಪಾಯಿ ಇಳಿಕೆ ಕಂಡಿತ್ತು. ಇದೀಗ ಶುಕ್ರವಾರ ಕೂಡಾ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್ಗೆ 262 ರುಪಾಯಿ ಕುಸಿತ ಕಂಡಿದೆ. ಅಂದರೆ ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 2,620 ರುಪಾಯಿ ಕುಸಿತ ಕಂಡಿದೆ..
ನಿನ್ನೆ 15,840 ರುಪಾಯಿ ಇದ್ದ 24 ಕ್ಯಾರಟ್ ಚಿನ್ನದ ಬೆಲೆ ಇಂದು 15,578 ರುಪಾಯಿಗೆ ಇಳಿಕೆ ಕಂಡಿದೆ. ಈ ಮೂಲಕ 24 ಕ್ಯಾರಟ್ ಚಿನ್ನದ ಮೇಲೆ ಹೂಡಿಕೆ ಮಾಡುವವರು ಕೊಂಚ ನಿಟ್ಟುಸಿರುಬಿಡುವಂತೆ ಆಗಿದೆ. ಇನ್ನು ಇದೇ ವೇಳೆ ಆಭರಣ ಚಿನ್ನವಾದ 22 ಕ್ಯಾರಟ್ ಬಂಗಾರದ ಬೆಲೆಯಲ್ಲೂ ಭಾರೀ ಕುಸಿತ ಕಂಡಿದೆ. ಇಂದು ಒಂದೇ ದಿನ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2400 ರುಪಾಯಿ ಇಳಿಕೆ ಕಂಡಿದೆ. ಇಂದು ಪ್ರತಿ ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,280 ರುಪಾಯಿಗಳಾಗಿವೆ.








