ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯ ಅಪಹರಣ, ಚೂರಿ ಇರಿತ ಪ್ರಕರಣ : ಸುಳ್ಳು ಹೇಳಿಕೆ ನೀಡಿದ ಬಾಲಕಿ.



(ನ್ಯೂಸ್ಕಡಬ) newskadaba.com,  ಫೆ.10 ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ.ನಗರದಲ್ಲಿ ಕಾಲೇಜಿಗೆ ಸೇರುವ ಆಸೆ ಹಿನ್ನೆಲೆ ಆಕೆಯೇ ಸಿನಿಮೀಯ ಮಾದರಿ ಕತೆ ಕಟ್ಟಿರೋದು ಪೊಲೀಸ್​​ ತನಿಖೆಯಿಂದ ಬಯಲಾಗಿದೆ. ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ತನ್ನನ್ನು ಅಪಹರಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು 16 ವರ್ಷದ  ಪಿಯುಸಿ ವಿದ್ಯಾರ್ಥಿನಿ ಆರೋಪಿಸಿದ್ದಳು.





ಕಾರಿನಲ್ಲಿ ಬಂದ 3 ಮಾಸ್ಕ್​​ಧಾರಿಗಳು ಚೂರಿ ತೋರಿಸಿ ಬಲವಂತವಾಗಿ ಎಳೆದು ಕಾರಲ್ಲಿ ಕೂರಿಸಲು ಯತ್ನಿಸಿದ್ದಾರೆ ಎಂದು ದೂರಿದ್ದಳು. ಈಸಮಯದಲ್ಲಿ  ತನ್ನ ಕೈಗೆ ಗಾಯವಾಗಿದೆ ಎಂದು ಹೇಳಿದ್ದಳು. ಈ ವಿಚಾರ ಕುಟುಂಬಸ್ಥರ ಜೊತೆಗೆ ಸ್ಥಳೀಯರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಹಿರಿಯ ಪೊಲೀಸ್​​ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.






ಆದರೆ ಪೊಲೀಸರ ತನಿಖೆ ವೇಳೆ ವಿದ್ಯಾರ್ಥಿನಿಯ ನಾಟಕ ಬಯಲಾಗಿದೆ. ಕಿಡ್ನ್ಯಾಪ್​​ ನಾಟಕ ಮಾಡಿದ್ರೆ ತನ್ನನ್ನು ಮನೆಯವರು ಮಂಗಳೂರಿ‌ನ ಕಾಲೇಜಿಗೆ ಸೇರಿಸುತ್ತಾರೆ ಎಂದುಕೊಂಡಿದ್ದ ಯುವತಿ ಅದಕ್ಕೆ ತಕ್ಕಂತೆ ಭರ್ಜರಿ ಪ್ಲ್ಯಾನ್​​ ಕೂಡ ಮಾಡಿದ್ದಳು. ಬ್ಲೇಡ್​​ನಲ್ಲಿ ತಾನೇ ಕೈ ಕೊಯ್ದುಕೊಂಡು ಕತೆ ಹೇಳಿದ್ದಳು. ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಯತ್ನ ಪ್ರಕರಣ ಸಂಬಂಧ ಪೊಲೀಸರು ಇಡೀ ದಿನ ಕಾರ್ಯಾಚರಣೆ ನಡೆಸಿದ್ದು, ಆದರೆ ತನಿಖೆ ವೇಳೆ ವಿದ್ಯಾರ್ಥಿನಿಯೇ ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟಿದ್ದಾಳೆ.

ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಫೆ.9ರಂದು ಬೆಳಗ್ಗೆ 8:30ರ ಸುಮಾರಿಗೆ ವಿದ್ಯಾರ್ಥಿನಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಅಪಹರಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿತ್ತು. ಈ ವೇಳೆ ತಾನು ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ತನ್ನ ಕೈಗೆ ಚೂರಿಯಿಂದ ಚುಚ್ಚಿ ಪರಾರಿಯಾದರು ಎಂದು ವಿದ್ಯಾರ್ಥಿನಿ ಪೊಲೀಸ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಳು. ಕೈಗೆ ಗಾಯವಾಗಿದ್ದರಿಂದ ಬಾಲಕಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

error: Content is protected !!
Scroll to Top