(ನ್ಯೂಸ್ ಕಡಬ) newskadaba.com,ಫೆ.06: ನಗರದ ನಂತೂರು ಬಸ್ ನಿಲ್ದಾಣದ ಸಮೀಪ ಬುಧವಾರ ರಾತ್ರಿ ಸಂಭವಿಸಿದ ಹೃದಯ ವಿದ್ರಾವಕ ಅಪಘಾತದಲ್ಲಿ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ದೀಪ್ತಿ (24) ಎಂಬ ಯುವತಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ಅತ್ಯಂತ ನೋವಿನ ಅಂಶವೆಂದರೆ, ಸ್ಕೂಟರ್ಗೆ ಡಿಕ್ಕಿ ಹೊಡೆದ ಅದೇ ಬಸ್ನಲ್ಲಿ ಅವರ ತಾಯಿಯೂ ಪ್ರಯಾಣಿಸುತ್ತಿದ್ದರು…
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕೆಯಾಗಿರುವ ಶಾಲಿನಿ ಅವರ ಐದು ಹೆಣ್ಣುಮಕ್ಕಳಲ್ಲಿ ದೀಪ್ತಿ ಹಿರಿಯವಳು. ಪ್ರೀತಿಯ ಅಕ್ಕನನ್ನು ಕಳೆದುಕೊಂಡ ಕಿರಿಯ ಸಹೋದರಿಯರ ಆಕ್ರಂದನ ಮುಗಿಲುಮುಟ್ಟಿತ್ತು.ಯುವತಿಯ ಸಾವನ್ನು ಖಂಡಿಸಿ, ದಲಿತ ಸಂಘಟನೆಗಳ ಮುಖಂಡರು ಗುರುವಾರ ಕದ್ರಿ ಪೊಲೀಸ್ ಠಾಣೆಯ ಎದುರು ಕೆಲಕಾಲ ಪ್ರತಿಭಟನೆ ನಡೆಸಿ, ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಘಟನೆಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ವರ್ಷ ಈಗಾಗಲೇ ನಗರ ವ್ಯಾಪ್ತಿಯಲ್ಲಿ ಆರರಿಂದ ಏಳು ಅಪಘಾತ ಪ್ರಕರಣಗಳು ಸಂಭವಿಸಿವೆ ಎಂದು ಅವರು ತಿಳಿಸಿ, ಕಾನೂನಿನ ಪ್ರಕಾರ ಎಲ್ಲ ಪ್ರಕರಣಗಳನ್ನೂ ನ್ಯಾಯಸಮ್ಮತವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.








