(ನ್ಯೂಸ್ ಕಡಬ) newskadaba.com,ಫೆ.03: ವಾಟ್ಸಾಪ್‌ನ 2021ರ ಗೌಪ್ಯತಾ ನೀತಿ ವಿಚಾರವಾಗಿ ಮೆಟಾ ಸಂಸ್ಥೆಯನ್ನು ಭಾರತದ ಸುಪ್ರೀಂ ಕೋರ್ಟ್ ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿದೆ. ಭಾರತೀಯ ಬಳಕೆದಾರರ ಗೌಪ್ಯತೆಯೊಂದಿಗೆ ಯಾವುದೇ ರೀತಿಯ ಸಂಧಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ಎಚ್ಚರಿಕೆ ನೀಡಿದೆ.ಮಂಗಳವಾರ (ಫೆ.3) ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ, “ನೀವು ನಮ್ಮ ಸಂವಿಧಾನವನ್ನು ಪಾಲಿಸಲು ಸಾಧ್ಯವಿಲ್ಲ ಎಂದರೆ ಭಾರತದಿಂದ ನಿರ್ಗಮಿಸಿ.
ಭಾರತೀಯ ಪ್ರಜೆಯ ಒಂದು ಡಿಜಿಟ್ ದತ್ತಾಂಶವನ್ನೂ ಪಡೆಯಲು ನಾವು ಅವಕಾಶ ನೀಡುವುದಿಲ್ಲ” ಎಂದು ಮೆಟಾಗೆ ಖಡಕ್ ಸಂದೇಶ ನೀಡಿತು. ವಾಟ್ಸಾಪ್ ತನ್ನ ಗೌಪ್ಯತಾ ನೀತಿಯ ಹೆಸರಿನಲ್ಲಿ ಬಳಕೆದಾರರ ದತ್ತಾಂಶವನ್ನು ವಾಣಿಜ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆಗೌಪ್ಯತಾ ನೀತಿಯ ಭಾಷೆ ಮತ್ತು ಅರ್ಥಗರ್ಭಿತತೆ ಕುರಿತೂ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. “ದೇಶದಲ್ಲಿರುವ ಕೋಟ್ಯಂತರ ಅನಕ್ಷರಸ್ಥರು, ಬಡವರು, ಗ್ರಾಮೀಣ ಪ್ರದೇಶದ ಜನರು ಅಥವಾ ಸ್ಥಳೀಯ ಭಾಷೆ ಮಾತ್ರ ಮಾತನಾಡುವವರು ನಿಮ್ಮ ಗೌಪ್ಯತಾ ನೀತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?” ಎಂದು ಸಿಜೆಐ ಪ್ರಶ್ನಿಸಿದರು.
ವಾಟ್ಸಾಪ್‌ನಲ್ಲಿ ದತ್ತಾಂಶ ದುರ್ಬಳಕೆಯ ಉದಾಹರಣೆ ನೀಡಿದ ಮುಖ್ಯ ನ್ಯಾಯಮೂರ್ತಿ, “ವಾಟ್ಸಾಪ್‌ನಲ್ಲಿ ಒಬ್ಬ ವೈದ್ಯರು ಮೂರು ಔಷಧಗಳ ಹೆಸರು ಕಳುಹಿಸಿದರೆ, ಕೆಲವೇ ನಿಮಿಷಗಳಲ್ಲಿ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳ ಮಳೆ ಆರಂಭವಾಗುತ್ತದೆ. ಇದು ದತ್ತಾಂಶದ ದುರ್ಬಳಕೆಯಲ್ಲವೇ?” ಎಂದು ಪ್ರಶ್ನಿಸಿದರು. ಈ ಮೂಲಕ, ವಾಟ್ಸಾಪ್ ಗೌಪ್ಯತಾ ನೀತಿ ಭಾರತೀಯ ಬಳಕೆದಾರರ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ಅದನ್ನು ಸಹಿಸಲಾಗುವುದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.








