(ನ್ಯೂಸ್ ಕಡಬ) newskadaba.com,ಫೆ,02 ಬೆಂಗಳೂರು : ಐಟಿ ಇಲಾಖೆಯ ವಿಚಾರಣೆಯ ವೇಳೆ, ನಗರದ ಖ್ಯಾತ ಉದ್ಯಮಿ ಸಿಜೆ ರಾಯ್, ಎದೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ನಿನ್ನೆ (ಫೆ. 1) ಅವರ ಅಂತ್ಯಕ್ರಿಯೆ ನಡೆದಿದೆ. ಜನವರಿ 30ರಂದು ರಾಯ್, ಮೃತರಾಗಿದ್ದರು…
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಉತ್ತಮ ಹೆಸರನ್ನು ಪಡೆದುಕೊಂಡಿದ್ದ ಸಿಜೆ ರಾಯ್ ಆತ್ಮಹತ್ಯೆ ಹಲವು ಪ್ರಶ್ನೆಗಳು ಹುಟ್ಟುಹಾಕುವಂತೆ ಮಾಡಿದೆ. ಕಾಂಗ್ರೆಸ್ ನಾಯಕರು, ಇದಕ್ಕೆ ಬಿಜೆಪಿ ಕಾರಣ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ, ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ಕೇರಳದ ಚುನಾವಣೆಗೆ ಹಣ ಕೊಡಬೇಕು ಎಂದು ಬಿಜೆಪಿ ಅವರನ್ನು ಟಾರ್ಚರ್ ಮಾಡಿರಬಹುದು ಎನ್ನುವ ಗಂಭೀರ ಆರೋಪವನ್ನು ಮಾಡಿದ್ದಾರೆ.
“ನನಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇರಳದ ಚುನಾವಣೆಗೆ ಬಿಜೆಪಿಯವರು ನೂರಾರು ಕೋಟಿ ರೂಪಾಯಿ ದುಡ್ಡು ಕೇಳಿದ್ದರು. ರಾಯ್ ಅವರು ಹಣ ಕೊಡದೇ ಇದ್ದಿದ್ದಕ್ಕೆ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಅಲ್ಲಿ ಏನು ನಡೆಯಿತು ಎನ್ನುವುದು ಯಾರಿಗೂ ಗೊತ್ತಿಲ್ಲ. ಅಲ್ಲಿ ಇದ್ದದ್ದು ಐಟಿ ಅಧಿಕಾರಿಗಳು ಮಾತ್ರ” ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಗಂಭೀರ ಆರೋಪವನ್ನು ಮಾಡಿದ್ದಾರೆ.
57ವರ್ಷದ ಈ ಉದ್ಯಮಿಯ ಆತ್ಮಹತ್ಯೆಗೆ ಕಾರಣ ಏನಿರಬಹುದು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ. ನಗರ ಪೊಲೀಸ್ ಆಯುಕ್ತರು ಎಸ್ಐಟಿ ರಚಿಸಿ ಆದೇಶವನ್ನು ಹೊರಡಿಸಿದ್ದಾರೆ. ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ಸಿ.ವಂಶಿಕೃಷ್ಣ ಅವರ ನೇತೃತ್ವದಲ್ಲಿ ವಿಚಾರಣೆ ಆರಂಭವಾಗಿದೆ…












