ಐತ್ತೂರಿನ ಶಿವಾಜಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ► ಪಂಚಾಯತ್ ಕಚೇರಿ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಕಡಬ, ಮೇ.08. ಕುಡಿಯುವ ನೀರು ಪೂರೈಕೆಯ ಕೊಳವೆ ಬಾವಿಗೆ ಅಳವಡಿಸಿದ ಪಂಪ್ ಕೆಟ್ಟು ಹೋಗಿ ಕಳೆದ 2 ವಾರಗಳಿಂದ ಕುಡಿಯಲೂ ನೀರಿಲ್ಲದೆ ಕಂಗಾಲಾಗಿರುವ ಐತ್ತೂರು ಗ್ರಾಮದ ಶಿವಾಜಿ ನಗರದ ನಿವಾಸಿಗಳು ಪಂಚಾಯತ್ ಕಚೇರಿ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರದಂದು ನಡೆದಿದೆ.

ಪಂಚಾಯತ್ ಕೊಳವೆ ಬಾಯಿಯ ಪಂಪ್ ಕುಟ್ಟುಹೋಗಿದ್ದು, ಬದಲಿ ಪಂಪ್ ಅಳವಡಿಸಿ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆಗೊಳಿಸುವಂತೆ ಮನವಿ ಮಾಡಿದರೂ ಪಿಡಿಒ ಕ್ರಮ ಕೈಗೊಂಡಿಲ್ಲ. ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಂತೆ ಲಿಖಿತ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಪಂಚಾಯತ್ ಸದಸ್ಯ ಧರ್ಮಪಾಲ ಕೆ. ಅವರು ಸ್ಥಳೀಯರು ಪಂಚಾಯತ್ ಮುಂದೆ ಜಮಾಯಿಸಿದರೂ ಪಿಡಿಒ ಅವರ ಜೊತೆ ಮಾತನಾಡಲೂ ಮುಂದಾಗಲಿಲ್ಲ ಎಂದು ದೂರಿದರು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಜನಪ್ರತಿನಿಧಿಗಳಾದ ನಾವು ನೇರವಾಗಿ ನೀರಿನ ಸಮಸ್ಯೆ ಇರುವಲ್ಲಿ ತೆರಳಿ ಕೆಟ್ಟುಹೋದ ಪಂಪ್ ಮೆಲೆತ್ತಿ ಬದಲಿ ಪಂಪ್ ಅಳವಡಿಸುವುದು ಸಾಧ್ಯವಿಲ್ಲ. ಪಿಡಿಒ ಈ ಕೆಲಸವನ್ನು ಮುತುವರ್ಜಿ ತೆಗೆದುಕೊಂಡು ಮಾಡಬೇಕಾಗಿತ್ತು. ಆದರೆ ಅವರು ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ವಿಷಾದದ ಸಂಗತಿ ಎಂದು ಸ್ಥಳದಲ್ಲಿದ್ದ ಪಂಚಾಯತ್ ಅಧ್ಯಕ್ಷ ಸತೀಶ್ ಕೆ. ಪ್ರತಿಕ್ರಿಯಿಸಿದರು. ಸ್ಥಳೀಯ ಮುಂದಾಲು ಅತ್ಯಡ್ಕ ನಾರಾಯಣ ಶೆಟ್ಟಿ, ನೀರಿನ ಫಲಾನುಭವಿಗಳಾದ ಅನೀಸ್, ಉದಯ ಕುಮಾರ್ ರೈ, ಅಬ್ಬಾಸ್, ಮಹಮ್ಮದ್ ಶರೀಫ್, ಜುಬೈದಾ, ಭಾಗೀರಥಿ, ಕೈಜಮ್ಮ, ಜಮೀಲ, ಸುಲೈಮಾನ್, ಸತ್ಯನ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Also Read  ರಾಜ್ಯದ ಎರಡನೇ ಅತಿ ಎತ್ತರದ ಧ್ವಜಸ್ತಂಭ ಕದ್ರಿ ಪಾರ್ಕಿನಲ್ಲಿ ಅನಾವರಣ

ಬದಲಿ ಪಂಪ್ ಲಭ್ಯವಿಲ್ಲದೇ ಇದ್ದುದರಿಂದ ಮತ್ತು ಕೆಟ್ಟುಹೋದ ಪಂಪ್ ದುರಸ್ತಿಯಾಗುವುದು ತಡವಾದುದರಿಂದ ಸಮಸ್ಯೆ ಎದುರಾಗಿತ್ತು. ಇದೀಗ ಪಂಪ್ ದುರಸ್ತಿಯಾಗಿ ಬಂದಿದ್ದು, ಕೊಳವೆ ಬಾವಿಗೆ ಇಳಿಸಲಾಗಿದೆ. ಸಮಸ್ಯೆ ಬಗೆಹರಿದಿದೆ ಎಂದು ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರು ತಿಳಿಸಿದ್ದಾರೆ.

error: Content is protected !!
Scroll to Top