ಮಂಗನ ಕಾಯಿಲೆಗೆ ಮೊದಲ ಬಲಿ, ಮಲೆನಾಡಿನಲ್ಲಿ ಹೆಚ್ಚಿದ ಆತಂಕ



(ನ್ಯೂಸ್ಕಡಬ) newskadaba.com,.30 ಶಿವಮೊಗ್ಗ: ಮಂಗನ ಕಾಯಿಲೆ ಸೋಂಕಿನಿಂದ ಬಳಲುತ್ತಿದ್ದ ತೀರ್ಥಹಳ್ಳಿ ತಾಲೂಕಿನ 29 ವರ್ಷದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇದರೊಂದಿಗೆ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಆತಂಕ ಹೆಚ್ಚಿದೆ.





ಮೃತ ಯುವಕನನ್ನು ಸಸಿ ತೋಟದ ನಿವಾಸಿ ಕಿಶೋರ್ ಎಂದು ಗುರುತಿಸಲಾಗಿದೆ. ಜ.20 ರಿಂದ ಕಿಶೋರ್ ವಿಪರೀತ ಜ್ವರದಿಂದ ಬಳಲುತ್ತಿದ್ದ. ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಜ್ವರದ ತೀವ್ರತೆ ಹೆಚ್ಚಾಗಿತ್ತು. ರೋಗಲಕ್ಷಣಗಳು ಉಲ್ಬಣಗೊಂಡ ಹಿನ್ನೆಲೆ, ಜ.25 ರಂದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ತಜ್ಞ ವೈದ್ಯರ ತಂಡ ಸತತ ಪ್ರಯತ್ನ ನಡೆಸಿದರೂ, ಸೋಂಕಿನ ತೀವ್ರತೆಯಿಂದಾಗಿ ಅವರು ಸಾವನ್ನಪ್ಪಿದ್ದಾರೆ.






ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕೆಎಫ್​ಡಿಯಿಂದಾಗಿ ಸಾವು ಸಂಭವಿಸಿರುವುದು ನೆರೆಯ ಜಿಲ್ಲೆಯಾದ ಚಿಕ್ಕಮಗಳೂರಿನ ಜನರಲ್ಲಿ ಆತಂಕ ಇಮ್ಮಡಿಗೊಳಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕುಗಳಾದ ಎನ್.ಆರ್. ಪುರ, ಶೃಂಗೇರಿ, ಕೊಪ್ಪ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಕೆ.ಎಫ್.ಡಿ ಲಕ್ಷಣಗಳು ಕಾಣಿಸಿಕೊಂಡಿವೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 9 ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 6 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!
Scroll to Top