(ನ್ಯೂಸ್ ಕಡಬ) newskadaba.com,ಜ.30 : ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮ್ನಳ್ಳಿ ಗ್ರಾಮದ ಪ್ರಸಿದ್ಧ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆಯಲ್ಲಿ ಭಕ್ತನೊಬ್ಬ ಸಲ್ಲಿಸಿದ ವಿಭಿನ್ನ ಹರಕೆ ಇದೀಗ ಎಲ್ಲರ ಗಮನ ಸೆಳೆದಿದೆ.
ಭಕ್ತ ಕೆ. ನಾಗರಾಜ ಉಲವತ್ತಿ ಅವರು, “ಚಿನ್ನದ ದರ ಇಳಿಯಲಿ, ಬಡವರು ಹಾಗೂ ಸಾಮಾನ್ಯ ಜನರೂ ಚಿನ್ನ ಖರೀದಿಸಲು ಸಾಧ್ಯವಾಗಲಿ” ಎಂಬ ಅಪರೂಪದ ಆಶಯದೊಂದಿಗೆ ದೇವಿಯ ಮುಂದೆ ಹರಕೆ ಸಲ್ಲಿಸಿದರು. ತಾಯಿಯ ರಥೋತ್ಸವದ ವೇಳೆ, ನಾಗರಾಜ ಉಲವತ್ತಿ ಅವರು ಬಾಳೆ ಹಣ್ಣಿನ ಮೇಲೆ “ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ” ಎಂದು ಬರೆದು ಭಕ್ತಿಪೂರ್ವಕವಾಗಿ ದೇವಿಗೆ ಅರ್ಪಿಸಿದರು.
ಚಿಮ್ನಳ್ಳಿ ದುರ್ಗಮ್ಮ ಜಾತ್ರೆಯಲ್ಲಿ ಭಕ್ತರ ಮಹಾಪೂರವೇ ಹರಿದು ಬರುತ್ತಿರುವ ಸಂದರ್ಭದಲ್ಲಿ, ನಾಗರಾಜ ಅವರ ಈ ವಿಶಿಷ್ಟ ಹರಕೆ ವಿಶೇಷ ಚರ್ಚೆಗೆ ಕಾರಣವಾಯಿತು. ದೇವಿಯ ಕೃಪೆಯಿಂದ ಚಿನ್ನದ ಬೆಲೆ ಇಳಿದು, ಸಾಮಾನ್ಯ ಜನರಿಗೂ ಚಿನ್ನದ ಕನಸು ನನಸಾಗಲಿ ಎಂಬ ಹಾರೈಕೆಯನ್ನು ಅನೇಕ ಭಕ್ತರು ವ್ಯಕ್ತಪಡಿಸಿದರು. ದೇಶಾದ್ಯಂತ ಚಿನ್ನದ ಬೆಲೆ ಏರಿಕೆಯಿಂದ ಸಾಮಾನ್ಯ ಜನರಲ್ಲಿ ಆತಂಕ ಹೆಚ್ಚಿರುವ ಈ ಸಂದರ್ಭದಲ್ಲಿ, ಭಕ್ತಿಪೂರ್ಣವಾಗಿ ವ್ಯಕ್ತವಾದ ಈ ಆಶಯ ಸಾಮಾಜಿಕವಾಗಿ ಕೂಡ ಗಮನ ಸೆಳೆದಿದೆ.








