(ನ್ಯೂಸ್ ಕಡಬ) newskadaba.com,ಜ.28 ಬೆಂಗಳೂರು: ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ನಾಳೆಯಿಂದ ಮುಷ್ಕರ ನಡೆಸಲು ಮುಂದಾಗಿದ್ದು, ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಇದು ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ.ವೇತನ ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ.
ಈ ನಡುವೆ ಗುರುವಾರ ಗೈರಾದರೆ ನೋ ವರ್ಕ್ ನೋ ಪೇ ಎಂದು ಕೆಎಸ್ಆರ್ಟಿಸಿ ಹೇಳಿದೆ. ಮತ್ತೊಂದೆಡೆ ನಾಳೆ ಸಂಜೆಯೊಳಗೆ ಬೇಡಿಕೆ ಈಡೇರದೇ ಇದ್ದರೆ, ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಲಾಗಿದೆ.ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬಸ್ ಸಂಚಾರದ ಮೇಲೆ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿದೆ. ಆದರೆ ಕೆಎಸ್ಆರ್ಟಿಸಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲಾ ಡಿಪೋಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡುವ ಯೋಜನೆ ಹಾಕಿದೆ. ಅಗತ್ಯವಿದ್ದರೆ ಇತರ ಡಿವಿಷನ್ಗಳಿಂದ ಬಸ್ಗಳನ್ನು ತರಲು ಸಿದ್ಧತೆ ನಡೆಸಲಾಗಿದೆ.
ಪ್ರಮುಖವಾಗಿ ಎರಡು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಲೋ ನಡೆಸಲಾಗುತ್ತಿದೆ. ಈ ಪೈಕಿ 2020ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ನೀಡಬೇಕು. 2024ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಆಗ್ರಹಿಸಲಾಗುತ್ತಿದೆ. ಇನ್ನು ನಾಳೆ ಸಂಜೆವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದೇ ಹೋದರೆ ಜ.30ರಿಂದ ಸಾರಿಗೆ ನೌಕರರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.












