ಎಟಿಎಂಗಳಿಗೆ ಠೇವಣಿ ಹಾಕಬೇಕಿದ್ದ ರೂ. 1 ಕೋಟಿಗೂ ಅಧಿಕ ನಗದು ದೋಚಿ ಸಿಬ್ಬಂದಿಯೇ ಪರಾರಿ



(ನ್ಯೂಸ್‌ ಕಡಬ) newskadaba.com,ಜ.27 ಬೆಂಗಳೂರು: ಎಟಿಎಂಗಳಿಗೆ ನಗದು ಠೇವಣಿ ಮಾಡುವ ನೆಪದಲ್ಲಿ ಒಂದು ಕೋಟಿಗೂ ಅಧಿಕ ಹಣವನ್ನು ದೋಚಿ, ಸಿಬ್ಬಂದಿಯೇ ಪರಾರಿಯಾದ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 400 ಕೋಟಿ ರೂಪಾಯಿ ನಗದು ದರೋಡೆ ಪ್ರಕರಣದ ಕುರಿತ ಚರ್ಚೆ ಇನ್ನೂ ತೀವ್ರವಾಗಿರುವ ಸಂದರ್ಭದಲ್ಲೇ ಮತ್ತೊಂದು ದೊಡ್ಡ ನಗದು ಕಳವು ಪ್ರಕರಣ ಬಹಿರಂಗವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.





ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲ ಸಿಬ್ಬಂದಿಯೇ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋರಮಂಗಲದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ಗೆ ಸೇರಿದ ವಿವಿಧ ಎಟಿಎಂಗಳಿಗೆ ನಗದು ಠೇವಣಿ ಮಾಡುವಂತೆ ಕಂಪನಿಯ ಅಧಿಕಾರಿ ಮಿಥುನ್ ಅವರು ಜನವರಿ 19ರಂದು ಸಿಬ್ಬಂದಿಗೆ ಸೂಚನೆ ನೀಡಿದ್ದರು.






ಎಟಿಎಂಗಳಿಗೆ ಹಣ ಹಾಕಲು ಕಂಪನಿಯ ಎರಡು ಪ್ರತ್ಯೇಕ ತಂಡಗಳಿಗೆ ನಗದು ಹಂಚಿಕೆ ಮಾಡಲಾಗಿತ್ತು. ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ವರುಣ್ ಎಂಬ ಸಿಬ್ಬಂದಿಗಳಿಗೆ ಎಟಿಎಂಗಳಿಗೆ ನಗದು ಠೇವಣಿ ಮಾಡುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಆರೋಪಿಗಳು ಎಟಿಎಂಗಳಿಗೆ ಹಣ ಜಮಾ ಮಾಡದೇ ನಗದಿನೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆ ದಾಖಲೆಗಳು ಹಾಗೂ ತಾಂತ್ರಿಕ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಘಟನೆ ಖಾಸಗಿ ನಗದು ನಿರ್ವಹಣಾ ಕಂಪನಿಗಳ ಭದ್ರತಾ ವ್ಯವಸ್ಥೆ ಮತ್ತು ನಿಗಾವ್ಯವಸ್ಥೆಯ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

error: Content is protected !!
Scroll to Top