(ನ್ಯೂಸ್ ಕಡಬ) newskadaba.com ,ಜ.10 : ವಿದ್ಯಾರ್ಥಿ ಜೀವನದ ಅತಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾದ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪತ್ರಿಕೆ ಸೋರಿಕೆಯಾದ ಬೆನ್ನಲ್ಲೇ ಎಸ್ಎಸ್ಎಲ್ಸಿಯ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಯೂ ಇದೇ ಆರೋಪಕ್ಕೆ ಸಿಲುಕಿದೆ.
ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 30 ರೂಪಾಯಿಗೆ ಮರಾಟವಾಗುತ್ತಿವೆ. ಅದರಲ್ಲೂ ಇನ್ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ನಲ್ಲಿ ಕೆಲವರು ಪ್ರಶೆ ಪತ್ರಿಕೆಯನ್ನೇ
ಟ್ಯಾಗ್ ಮಾಡಿ ಸೋರಿಕೆ ಮಾಡಿದ್ದಾರೆ.
ಪ್ರಶ್ನೆಪತ್ರಿಕೆ ಬೇಕೇ? ಎಂದು ಕೇಳಲಾಗುತ್ತಿದ್ದು, ಕೇವಲ 30 ರೂ. ಕೊಟ್ಟರೆ ತಲುಪಿಸಲಾಗುವುದು ಎಂದು ಬೇಡಿಕೆ ಇಟ್ಟಿದ್ದಾರೆ. ಯಾವುದೋ ಮೊಬೈಲ್ ಪ್ರಮೋಷನ್ ವಿಡಿಯೋ ಮಾಡುವಂತೆ ಕಿಡಿಗೇಡಿಗಳು ಇನ್ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ನಲ್ಲಿ ಪ್ರಶ್ನೆ ಪತ್ರಿಕೆ ಬೇಕಿದ್ದರೆ ಡಿಎಂ ಮಾಡಿ ಎಂದು ಬಹಿರಂಗವಾಗಿ ಪೋಸ್ಟ್ ಹಾಕುತ್ತಿದ್ದಾರೆ.
ಪರೀಕ್ಷೆ ಆರಂಭಕ್ಕೂ ಮುನ್ನ ಬೆಳಿಗ್ಗೆ 8.15ಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ. ಇಷ್ಟೇ ಅಲ್ಲದೆ, ಕ್ಯೂಆರ್ ಕೋಡ್ ಕಳುಹಿಸಿ 30 ರೂ.ಗಳಿಂದ 50 ರೂ. ಹಣ ಪಾವತಿಸಿದರೆ ಸಾಕು, ನಿಮ ಕೈಗೆ ಪ್ರಶ್ನೆ ಪತ್ರಿಕೆ ಸೇರುತ್ತದೆ ಎಂಬ ಆಫರ್ಗಳು ಬರುತ್ತಿವೆ. ಇದರಿಂದ ವಿದ್ಯಾರ್ಥಿಗಳು ಕೂಡ ಆತಂಕಕ್ಕೊಳಗಾಗಿದ್ದಾರೆ. ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ತಮ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಇಂತಹ ಕೃತ್ಯವೆಸಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಶಿಕ್ಷಣ ಇಲಾಖೆಯು ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳ ಪರಿಕಲ್ಪನೆ ತಂದಿದೆ.












