(ನ್ಯೂಸ್ ಕಡಬ) newskadaba.com ,ಜ.09 ಕಲಬುರಗಿ: ಕರ್ನಾಟಕ ಕೇಂದ್ರೀಯ ವಿವಿ ಸ್ನಾತಕ ಪದವಿ ಪ್ರವೇಶದಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಕಲಂ 371 (ಕೆ) ಅನ್ವಯ ಶೇ. 8ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಹೀಗಾಗಿ ಇಲ್ಲಿರುವ 15 ಸ್ನಾತಕ ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲಿಯೂ 3ರಿಂದ 6ರಷ್ಟು ಸ್ಥಾನಗಳು ಕಲ್ಯಾಣ ಭಾಗದವರಿಗೆ ಲಭ್ಯವಾಗಲಿವೆ ಎಂದು ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟು ಸತ್ಯನಾರಾಯಣ ಹೇಳಿದ್ದಾರೆ.
ಕೇಂದ್ರೀಯ ವಿವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗಕ್ಕೆ ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ವಿಶೇಷ ಸವಲತ್ತು ದೊರಕಿದೆ. ಅದೇ ಹಿನ್ನೆಲೆಯಲ್ಲಿ ಕೇಂದ್ರೀಯ ಸಂಸ್ಥೆಯಾದರೂ ತಮ್ಮ ವ್ಯಾಪ್ತಿಯಲ್ಲಿ ಕಲ್ಯಾಣದ ಜಿಲ್ಲೆಗಳ ಮಕ್ಕಳು ಹೆಚ್ಚಿಗೆ ಕೇಂದ್ರೀಯ ವಿವಿ ಪ್ರವೇಶ ಹೊಂದಲಿ ಎಂಬ ಸದುದ್ದೇಶದಿಂದ ಈ ಮೀಸಲಾತಿ ಮುಂದುವರಿಸಲಾಗಿದೆ ಎಂದರು.
15 ಸ್ನಾತಕ ಪದವಿ ವಿಭಾಗಗಳಿಗೆ ಪ್ರವೇಶ ಪ್ರಕ್ರಿಯೆ
ಈಗಾಗಲೇ ಇಲ್ಲಿನ 15 ಸ್ನಾತಕ ಪದವಿ ವಿಭಾಗಗಳಿಗೆ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಜ. 3ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಜ 31ರವರೆಗೆ ಅವಕಾಶವಿದೆ.ಕಲ್ಯಾಣ ನಾಡಿನ ಮಕ್ಕಳು ಹೆಚ್ಚಿಗೆ ಅರ್ಜಿ ಸಲ್ಲಿಸಿ ಕೇಂದ್ರೀಯ ವಿವಿ ಪ್ರವೇಶ ಪಡೆಯುವಂತಾಗಲಿ ಎಂದರು.
ಎನ್‌ಟಿಎ ಈ ಪ್ರವೇಶ ಪರೀಕ್ಷೆ ನಡೆಸಲಿದೆ. ಕಲಬುರಗಿ ಸೇರಿದಂತೆ ಬಳ್ಳಾರಿ, ಬೆಳಗಾವಿ, ಶಿವಮೊಗ್ಗ, ಮಂಗಳೂರು, ಬೀದರ್, ದಾವಣಗೆರೆ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಚಿಕ್ಕಮಗಳೂರು ಇಲ್ಲೆಲ್ಲಾ ಪರೀಕ್ಷಾ ಕೇಂದ್ರಗಳಿವೆ. ರಾಜ್ಯದ ಮಕ್ಕಳು ಹೆಚ್ಚಿಗೆ ಪರೀಕ್ಷೆ ಬರೆಯಲೆಂದು ಎಲ್ಲೆಡೆ ಕೇಂದ್ರಗಳನ್ನು ಮಾಡಲಾಗಿದೆ ಎಂದು ಕುಲಪತಿಗಳು ವಿವರಿಸಿದರು.ಮಹಾರಾಷ್ಟ್ರ ಗಡಿಗೆ ಹೊಂದಿದಂತೆ 13, ರಾಯಲಸೀಮಾ ಭಾಗದಲ್ಲಿ 9 ಹಾಗೂ ತೆಲಂಗಾಣ ಭಾಗದಲ್ಲಿ 1 ಪರೀಕ್ಷಾ ಕೇಂದ್ರಗಳಿದ್ದು ಎಲ್ಲಾ ಕಡೆಯಿಂದಲೂ ಮಕ್ಕಳು ಹೆಚ್ಚಿಗೆ ಬರಲಿ ಎಂಬುದೇ ಉದ್ದೇಶವೆಂದರು.












