ಮಂಗಳೂರು: ನದಿಗೆ ಬಿದ್ದು ಛತ್ತೀಸ್‌ಗಢದ ಮೀನುಗಾರ ಸಾವು



(ನ್ಯೂಸ್‌ ಕಡಬ) newskadaba.com, ಮಂಗಳೂರು: ಮೀನುಗಾರಿಕಾ ದೋಣಿಯನ್ನು ಸುರಕ್ಷಿತವಾಗಿಡುವಾಗ ಆಕಸ್ಮಿಕವಾಗಿ ನದಿಗೆ ಬಿದ್ದು ಛತ್ತೀಸ್‌ಗಢದ ಮೀನುಗಾರ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ಮಂಗಳೂರು ಬಂದರ್‌ನಲ್ಲಿ ನಡೆದಿದೆ.
ಮೃತರನ್ನು ಛತ್ತೀಸ್‌ಗಢದ ಜಸ್ಪುರ್ ಜಿಲ್ಲೆಯ ಬರ್ಖಾಸ್ ಪಾಲಿ ಗ್ರಾಮದ ಪ್ರಹ್ಲಾದ್ ಚೌಹಾಣ್ (33) ಎಂದು ಗುರುತಿಸಲಾಗಿದೆ. ಅವರು ಸುಮಾರು ಒಂದು ವರ್ಷದ ಹಿಂದೆ ಮಂಗಳೂರಿಗೆ ಬಂದು ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರು ಬಂದರ್‌ನ ಉಪ್ಪುಧಕ್ಕ ಪ್ರದೇಶದಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





ಜೆಟ್ಟಿಯಲ್ಲಿ ಲಂಗರು ಹಾಕಲಾಗಿದ್ದ ಹಸನ್ ಅಲ್ ಬಹಾರ್ ಎಂಬ ಮೀನುಗಾರಿಕಾ ದೋಣಿಯ ಹಗ್ಗವನ್ನು ಪ್ರಹ್ಲಾದ್ ಕಟ್ಟುತ್ತಿದ್ದಾಗ ಸಮತೋಲನ ತಪ್ಪಿ ನದಿಗೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ದೋಣಿಯಲ್ಲಿದ್ದ ಸಹ ಮೀನುಗಾರರು ತಕ್ಷಣ ರಕ್ಷಣೆಗೆ ಪ್ರಯತ್ನಿಸಿದರು ಮತ್ತು ಅವರನ್ನು ನೀರಿನಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು ಕೂಡ , ಅವರನ್ನು ಹೊರತರುವ ಹೊತ್ತಿಗೆ ಅವರು ಸಾವನ್ನಪ್ಪಿದ್ದರು.






ನಂತರ ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ನಂತರ ವಿಮಾನದ ಮೂಲಕ ಅವರ ಹುಟ್ಟೂರಿಗೆ ಕಳುಹಿಸಲಾಯಿತು. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

error: Content is protected !!
Scroll to Top