(ನ್ಯೂಸ್ ಕಡಬ) newskadaba.com,ಡಿ.31: ದೇಶದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣವಾಗಿ ಉತ್ತರ ಪ್ರದೇಶ 2025ರಲ್ಲಿ ಗುರುತಿಸಿಕೊಂಡಿದೆ. ಈ ವರ್ಷದಲ್ಲಿ ಅತೀ ಹೆಚ್ಚು ದೇಶೀಯ ಪ್ರವಾಸೋದ್ಯಮವನ್ನು ಉತ್ತರ ಪ್ರದೇಶ ದಾಖಲಿದೆ. ವಿದೇಶಿ ಪ್ರವಾಸಿಗರ ಭೇಟಿಯಲ್ಲಿ ಇದು ನಾಲ್ಕನೇ ಸ್ಥಾನದಲ್ಲಿದೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ತಾಣಗಳ ಅಭಿವೃದ್ಧಿಯು ಉತ್ತರ ಪ್ರದೇಶವನ್ನು ದೇಶೀಯ ಪ್ರವಾಸೋದ್ಯಮದಲ್ಲಿ ಅತ್ಯಂತ ಜನಪ್ರಿಯ ತಾಣವಾಗಿ ಮಾಡಿದೆ. ಈ ವರ್ಷದಲ್ಲಿ 137 ಕೋಟಿಗೂ ಹೆಚ್ಚು ದೇಶೀಯ ಪ್ರವಾಸಿಗರು ಮತ್ತು 3.66 ಲಕ್ಷ ವಿದೇಶಿ ಪ್ರವಾಸಿಗರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
ಈ ಕುರಿತು ಸೋಮವಾರ ಮಾಹಿತಿ ನೀಡಿದ ಉತ್ತರ ಪ್ರದೇಶ ರಾಜ್ಯ ಸರ್ಕಾರ, ಉತ್ತರ ಪ್ರದೇಶವು ಪ್ರವಾಸೋದ್ಯಮದಲ್ಲಿ ದಾಖಲೆ ಬರೆಯಲು ಹಲವು ಕಾರಣಗಳಿವೆ. ಮುಖ್ಯವಾಗಿ ಈ ಬಾರಿ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದಲ್ಲೇ 66 ಕೋಟಿಗೂ ಹೆಚ್ಚು ಪ್ರವಾಸಿಗರು ಪಾಲ್ಗೊಂಡಿದ್ದರು. ಇನ್ನು ಅಯೋಧ್ಯೆ, ವಾರಣಾಸಿ, ಮಥುರಾ ವೃಂದಾವನ ಮತ್ತು ಶ್ರಾವಸ್ತಿ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಾಗಿ ಗುರುತಿಸಲ್ಪಟ್ಟಿದೆ. ಇನ್ನು ರಾಜ್ಯಾದ್ಯಂತ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸುವ ‘ದೀಪೋತ್ಸವ’, ‘ರಂಗೋತ್ಸವ’, ‘ದೇವ ದೀಪಾವಳಿ’ ಮತ್ತು ‘ಮಾಘ ಮೇಳ’ ಮುಂತಾದ ನಿಯಮಿತ ಕಾರ್ಯಕ್ರಮಗಳು ಇಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸಿದೆ ಎಂದು ತಿಳಿಸಿದೆ.








